Wednesday, 11th December 2024

Smart India Hackathon: ಯುವ ಜನತೆ ಎದುರಿಸುವ ಸವಾಲು ನಿವಾರಿಸಲು ಕೇಂದ್ರ ಬದ್ಧ: ಪ್ರಧಾನಿ ಮೋದಿ ಭರವಸೆ

Smart India Hackathon

ಹೊಸದಿಲ್ಲಿ: ”ದೇಶದ ಯುವ ಜನತೆ ಎದುರಿಸುವ ಸವಾಲುಗಳನ್ನು ನಿವಾರಿಸಲು ಕೇಂದ್ರ ಸರ್ಕಾರ ಹಲವು ಸುಧಾರಣಾ ಕ್ರಮಗಳನ್ನು ಪರಿಚಯಿಸುತ್ತಿದೆ” ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಬುಧವಾರ (ಡಿ. 11) ತಿಳಿಸಿದರು. ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ (Smart India Hackathon)ನ ಗ್ರ್ಯಾಂಡ್‌ ಫಿನಾಲೆಯಲ್ಲಿ ಅವರು ಮಾತನಾಡಿದರು.

“ಯುವ ಜನತೆ ಮತ್ತು ತಂತ್ರಜ್ಞಾನ ಭಾರತದ ಶಕ್ತಿ. ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ನಾವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಿಚಯಿಸಿದ್ದೇವೆ. ಸುಧಾರಣೆಗಳನ್ನು ಪರಿಚಯಿಸುವ ಮೂಲಕ ಸರ್ಕಾರವು ದೇಶದ ಯುವಜನತೆಯ ಸಾಧನೆಯ ಹಾದಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುತ್ತಿದೆ” ಎಂದು ಮೋದಿ ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು. ʼʼಭವಿಷ್ಯದ ವಿಶ್ವವು ನಾವೀನ್ಯತೆ ಮತ್ತು ಜ್ಞಾನದಿಂದ ನಡೆಸಲ್ಪಡುತ್ತದೆ. ಭಾರತದ ಯುವಜನತೆ ದೇಶದ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವತ್ತ ಗಮನ ಹರಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ನ 7ನೇ ಆವೃತ್ತಿ ದೇಶಾದ್ಯಂತ 51 ನೋಡಲ್‌ ಕೇಂದ್ರಗಳಲ್ಲಿ ಆರಂಭವಾಗಿದೆ. ವಿದ್ಯಾರ್ಥಿಗಳಲ್ಲಿರುವ ಸೃಜನಶೀಲತೆಯನ್ನು ರಾಷ್ಟ್ರದ ಅಭಿವೃದ್ದಿಗೆ ಬಳಸಿಕೊಳ್ಳಲು ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಮಾರ್ಟ್‌ ಇಂಡಿಯಾ ಹ್ಯಾಕಥಾನ್‌ ಆಯೋಜಿಸುತ್ತಿದೆ. ಸತತ 36 ಗಂಟೆಗಳ ಪ್ರೊಗ್ರಾಮಿಂಗ್‌ ಸ್ಪರ್ಧೆ ಇದಾಗಿದ್ದು, ನೋಡೆಲ್‌ ಸೆಂಟರ್‌ಗಳಲ್ಲಿ ಆಯೋಜಿಸಲಾಗುತ್ತದೆ. ಹಾರ್ಡ್‌ವೇರ್‌ ಸ್ಪರ್ಧೆ ಡಿ. 11ರಿಂದ ಡಿ. 15ರ ತನಕ ನಡೆಯಲಿದೆ.

ದೇಶದಲ್ಲಿ ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ವೈಜ್ಞಾನಿಕ ಮನೋಭಾವವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಭಾಗವಾಗಿ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ (SIH) ಅನ್ನು 2017ರಲ್ಲಿ ಪ್ರಾರಂಭಿಸಲಾಯಿತು. ಇದು ಸಮಾಜದ, ಸಂಸ್ಥೆಗಳ ಮತ್ತು ಸರ್ಕಾರದ ತುರ್ತು ಸಮಸ್ಯೆಗಳನ್ನು ಪರಿಹರಿಸಲು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ಒದಗಿಸುವ ರಾಷ್ಟ್ರವ್ಯಾಪಿ ಉಪಕ್ರಮ. ಜತೆಗೆ ವಿದ್ಯಾರ್ಥಿಗಳಲ್ಲಿ ಉತ್ಪನ್ನ ಆವಿಷ್ಕಾರ, ಸಮಸ್ಯೆ-ಪರಿಹಾರ ಮತ್ತು ಚೌಕಟ್ಟಿನಾಚೆಗಿನ ಚಿಂತನಾ ಸಂಸ್ಕೃತಿಯನ್ನು ಬೆಳೆಸುವ ಗುರಿಯನ್ನು ಹೊಂದಿದೆ.

ಹಿಂದಿನ ಆವೃತ್ತಿಗಳಂತೆ ಈ ಬಾರಿಯೂ ವಿದ್ಯಾರ್ಥಿ ತಂಡಗಳು ಸಚಿವಾಲಯಗಳು, ಇಲಾಖೆಗಳು ಅಥವಾ ಕೈಗಾರಿಕೆಗಳು ನೀಡಿದ ಸಮಸ್ಯೆಗಳ ಮೇಲೆ ಕೆಲಸ ಮಾಡುತ್ತವೆ. ಆರೋಗ್ಯ, ಪೂರೈಕೆ ಸರಪಳಿ ಮತ್ತು ಲಾಜಿಸ್ಟಿಕ್ಸ್, ಸ್ಮಾರ್ಟ್ ತಂತ್ರಜ್ಞಾನಗಳು, ಪರಂಪರೆ ಮತ್ತು ಸಂಸ್ಕೃತಿ, ಸುಸ್ಥಿರತೆ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ, ನೀರು, ಕೃಷಿ ಮತ್ತು ಆಹಾರ, ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ವಿಪತ್ತು ನಿರ್ವಹಣೆ ಈ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸ್ಪರ್ಧೆ ನಡೆಯುತ್ತದೆ.

ಶಿಕ್ಷಣ ಸಚಿವಾಲಯದ ಪ್ರಕಾರ ಈ ವರ್ಷ, 54 ಸಚಿವಾಲಯಗಳು, ಇಲಾಖೆಗಳು, ರಾಜ್ಯ ಸರ್ಕಾರಗಳು, ಪಿಎಸ್ಯುಗಳು ಮತ್ತು ಕೈಗಾರಿಕೆಗಳು 250ಕ್ಕೂ ಹೆಚ್ಚು ಸಮಸ್ಯೆಗಳನ್ನು ವಿದ್ಯಾರ್ಥಿಗಳ ಮುಂದಿಟ್ಟಿದ್ದವು. ʼʼಸುಮಾರು 49,000 ವಿದ್ಯಾರ್ಥಿ ತಂಡಗಳನ್ನು (ಪ್ರತಿಯೊಂದು ತಂಡವು 6 ವಿದ್ಯಾರ್ಥಿಗಳು ಮತ್ತು 2 ಮಾರ್ಗದರ್ಶಕರನ್ನು ಒಳಗೊಂಡಿದೆ) ರಾಷ್ಟ್ರೀಯ ಮಟ್ಟದ ಸುತ್ತಿಗೆ ಶಿಫಾರಸು ಮಾಡಲಾಗಿದೆ” ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Narendra Modi: ಪ್ರಧಾನಿ ಮೋದಿಗೆ ಪ್ರಾಣ ಬೆದರಿಕೆ; ಮುಂಬೈ ಪೊಲೀಸರಿಗೆ ಬಂದ ವಾಟ್ಸ್‌ಆ್ಯಪ್‌ ಸಂದೇಶದಲ್ಲಿ ಏನಿದೆ?