Thursday, 14th November 2024

Sovereign Gold Bond: ಗೋಲ್ಡ್‌ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದವರಿಗೆ ಲಾಭ ಡಬಲ್

gold rate today

ಮುಂಬೈ: ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ(RBI)ದ ಸಾವರಿನ್‌ ಗೋಲ್ಡ್‌ ಬಾಂಡ್‌ಗಳಲ್ಲಿ (Sovereign Gold Bond) ಹೂಡಿಕೆ ಮಾಡಿದವರಿಗೆ ಕಳೆದ 8 ವರ್ಷಗಳಲ್ಲಿ ಭರ್ಜರಿ ಆದಾಯ ಲಭಿಸಿದೆ. ಕಳೆದ 2016ರ ನವೆಂಬರ್‌ 17ರಂದು ಬಿಡುಗಡೆ ಮಾಡಿದ್ದ ಎಸ್‌ಜಿಬಿ 2016-17 ಸೀರಿಸ್‌ -3 ಇದೀಗ ಮೆಚ್ಯೂರ್‌ ಆಗಿದೆ. ಹೂಡಿಕೆದಾರರ ಹೂಡಿಕೆ ಕಳೆದ 8 ವರ್ಷಗಳಲ್ಲಿ ಡಬಲ್‌ಗೂ ಹೆಚ್ಚು ಬೆಳೆದಿದೆ. ಪ್ರತಿ ಗ್ರಾಮ್‌ ಬಂಗಾರಕ್ಕೆ ಆಗ 3,007 ರೂ. ಹೂಡಿಕೆ ಮಾಡಿದ್ದವರಿಗೆ ಈಗ 7,788 ರೂ. ಸಿಗುತ್ತಿದೆ. ಇದರ ಜತೆಗೆ 8 ವರ್ಷಗಳಿಗೆ ವಾರ್ಷಿಕ 2.50% ಬಡ್ಡಿಯೂ ಸಿಗಲಿದೆ.

ಸಾವರಿನ್‌ ಗೋಲ್ಡ್‌ ಬಾಂಡ್‌ 2016-17 ಸಿರೀಸ್‌ನ ಅಂತಿಮ ರಿಡಂಪ್ಷನ್‌ ದಿನಾಂಕವು 2024ರ ನವೆಂಬರ್‌ 16 ಆಗಿದೆ. ನವೆಂಬರ್‌ 17 ರಜಾ ದಿನವಾದ್ದರಿಂದ ನವೆಂಬರ್‌ 16ಕ್ಕೆ ದಿನಾಂಕ ನಿಗದಿಯಾಗಿದೆ. ಭಾರತ ಸರ್ಕಾರದ ಪರವಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಈ ಗೋಲ್ಡ್‌ ಬಾಂಡ್‌ಗಳನ್ನು ಬಿಡುಗಡೆ ಮಾಡಿತ್ತು.

ಅಂತಿಮ ರಿಡಂಪ್ಷನ್‌ ದರ ನಿಗದಿ ಹೇಗೆ?

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ 2024ರ ನವೆಂಬರ್‌ 8ಕ್ಕೆ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಪ್ರತಿ ಯುನಿಟ್‌ ಎಸ್‌ಜಿಬಿ ದರ 7,788 ರೂ.ಗಳಾಗಿದೆ. 2024ರ ನವೆಂಬರ್‌ 4-8ರ ವಾರದಲ್ಲಿ ಚಿನ್ನದ ಸರಾಸರಿ ದರವನ್ನು ಆಧರಿಸಿ ಇದನ್ನು ನಿಗದಿಪಡಿಸಲಾಗಿದೆ. ಈ ಗೋಲ್ಡ್‌ ಬಾಂಡ್‌ ಬಿಡುಗಡೆಯಾದಾಗ ಪ್ರತಿ ಯುನಿಟ್‌ ಎಸ್‌ಜಿಬಿ ದರ 3,007 ರೂ. ಆಗಿತ್ತು.

ಮೆಚ್ಯೂರಿಟಿಯಾಗುವ ಹಣ ಪಡೆಯೋದು ಹೇಗೆ?

ಹೂಡಿಕೆದಾರರು ಗೋಲ್ಡ್‌ ಬಾಂಡ್‌ ಮೆಚ್ಯೂರಿಟಿಯಾಗುವ ದಿನದಂದೇ ಹಣವನ್ನು ಪಡೆಯಬಹುದು. ಅವರ ಬ್ಯಾಂಕ್‌ ಖಾತೆಗೆ ಹಣ ಜಮೆಯಾಗುತ್ತದೆ. ಅಕೌಂಟ್‌ ನಂಬರ್‌, ಇ-ಮೇಲ್‌ ಐಡಿ ಇತ್ಯಾದಿ ವಿವರಗಳಲ್ಲಿ ಬದಲಾವಣೆ ಇದ್ದರೆ, ಬ್ಯಾಂಕಿಗೆ ಮುಂಚಿತವಾಗಿ ತಿಳಿಸಬೇಕು. ನೀವು ಒಂದು ವೇಳೆ ಪೋಸ್ಟ್‌ ಆಫೀಸ್‌ನಲ್ಲಿ ಎಸ್‌ಜಿಬಿ ಖರೀದಿಸಿದ್ದರೆ, ಅಲ್ಲಿಗೆ ಹೋಗಿ ಪರಿಷ್ಕೃತ ಮಾಹಿತಿಯನ್ನು ನೀಡಬಹುದು. ವಾರ್ಷಿಕ ಬಡ್ಡಿಯ ಹಣವನ್ನೂ ಅಸಲಿನ ಜತೆಗೆ ಸೇರಿಸಿ ಕೊಡುತ್ತಾರೆ.

ಹೂಡಿಕೆದಾರ ಮೃತಪಟ್ಟಿದ್ದರೆ ಏನು ಮಾಡಬಹುದು?

ಆರ್‌ಬಿಐ ಪ್ರಕಾರ, ಹೂಡಿಕೆದಾರರು ಒಂದು ವೇಳೆ ಮೃತಪಟ್ಟಿದ್ದರೆ, ನಾಮಿನಿಗೆ ಹೂಡಿಕೆಯ ಹಣ ಸಿಗುತ್ತದೆ. ನಾಮಿನಿ ಇಲ್ಲದಿದ್ದರೆ, ಸಂಬಂಧಿಸಿದ ವಾರಸುದಾರರು ಅಗತ್ಯ ದಾಖಲಾತಿಗಳೊಂದಿಗೆ ಕ್ಲೇಮ್‌ ಮಾಡಿಕೊಳ್ಳಬಹುದು. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಕಳೆದ ಫೆಬ್ರವರಿಯಿಂದ ಯಾವುದೇ ಹೊಸ ಸಾವರಿನ್‌ ಗೋಲ್ಡ್‌ ಬಾಂಡ್‌ ಸಿರೀಸ್‌ ಅನ್ನು ಬಿಡುಗಡೆಗೊಳಿಸಿಲ್ಲ. ಹೀಗಿದ್ದರೂ, ಸೆಕೆಂಡರಿ ಮಾರುಕಟ್ಟೆಯಲ್ಲಿ ಎನ್‌ಎಸ್‌ಇ ಅಥವಾ ಬಿಎಸ್‌ಇನಲ್ಲಿ ಎಸ್‌ಜಿಬಿಯನ್ನು ಖರೀದಿಸಬಹುದು.

ಹೂಡಿಕೆಗೆ ಭೌತಿಕ ಬಂಗಾರಕ್ಕಿಂತ ಎಸ್‌ಜಿಬಿ ಏಕೆ ಉತ್ತಮ? ಏನಿದರ ಲಾಭ?

ಎಸ್‌ಜಿಬಿಯಲ್ಲಿ ಹೂಡಿಕೆದಾರರ ಹೂಡಿಕೆಯ ಅಷ್ಟೂ ಮೌಲ್ಯದಲ್ಲಿ ಯಾವುದೇ ಸವಕಳಿ ಆಗುವುದಿಲ್ಲ. ಅದು ಸಂಪೂರ್ಣ ಸುರಕ್ಷಿತ. ರಿಡಂಪ್ಷನ್‌ ಅವಧಿಯಲ್ಲಿ ಆಗಿನ ಮಾರುಕಟ್ಟೆಯ ದರ ನಿಗದಿಯಾಗುತ್ತದೆ. ಭೌತಿಕ ಬಂಗಾರವನ್ನು ಖರೀದಿಸಿದರೆ ಅದರ ಸುರಕ್ಷತೆಗೆ ಹೆಚ್ಚುವರಿ ಖರ್ಚಾಗುತ್ತದೆ. ಲಾಕರ್‌ ವೆಚ್ಚಗಳು ಸೇರುತ್ತವೆ. ಆಭರಣ ಖರೀದಿಸಿದರೆ ಮೇಕಿಂಗ್‌ ಚಾರ್ಜ್‌ಗಳು ಅನ್ವಯವಾಗಬಹುದು.

ಮಾರುಕಟ್ಟೆಯಲ್ಲಿ ಬಂಗಾರದ ದರ ಇಳಿಕೆಯಾದರೆ ಮಾತ್ರ ಎಸ್‌ಜಿಬಿಯಲ್ಲಿ ಹೂಡಿಕೆಯ ಮೌಲ್ಯದಲ್ಲಿ ಇಳಿಕೆಯಾದೀತು. ಆದರೆ ಚಾರಿತ್ರಿಕ ದಾಖಲೆಗಳ ಪ್ರಕಾರ ಚಿನ್ನದ ದರ ಇಳಿಕೆ ತಾತ್ಕಾಲಿಕ. ಹೀಗಾಗಿ ದೀರ್ಘಾವಧಿಗೆ ಲಾಭದಾಯಕವಾಗಿರುತ್ತದೆ. ಅಪ್ರಾಪ್ತ ಮಕ್ಕಳ ಹೆಸರಿನಲ್ಲೂ ಪೋಷಕರು ಎಸ್‌ಜಿಬಿಯಲ್ಲಿ ಹೂಡಿಕೆಯನ್ನು ಮಾಡಬಹುದು. ಹೂಡಿಕೆದಾರರು ಗೋಲ್ಡ್‌ ಬಾಂಡ್‌ನಲ್ಲಿ ಕನಿಷ್ಠ 1 ಗ್ರಾಮ್‌ ಚಿನ್ನ ಹಾಗೂ ವಾರ್ಷಿಕ ಗರಿಷ್ಠ 4 ಕೆ.ಜಿ ಬಂಗಾರದ ತನಕ ಹೂಡಿಕೆ ಮಾಡಬಹುದು. ಟ್ರಸ್ಟ್‌ಗಳಾಗಿದ್ದರೆ 20 ಕೆ.ಜಿ ತನಕ ಹೂಡಿಕೆಯನ್ನು ಮಾಡಬಹುದು.

ಈ ಸುದ್ದಿಯನ್ನೂ ಓದಿ: Trump Effect on Stock Market: ಟ್ರಂಪ್‌ ಎಫೆಕ್ಟ್- ಭಾರತದಲ್ಲಿ ಯಾವ ಸೆಕ್ಟರ್‌ ಷೇರಿಗೆ ಲಾಭ?