Thursday, 12th December 2024

ಸ್ಪೆಷಲ್ 26 ಸಿನೆಮಾ ಶೈಲಿಯಲ್ಲಿ ಬಿಹಾರದಲ್ಲಿ 4.5 ಲಕ್ಷ ರೂ. ದರೋಡೆ

ಪಾಟ್ನಾ: ಅಕ್ಷಯ್ ಕುಮಾರ್‌, ಅನುಪಮ್ ಖೇರ್‌ ಅಭಿನಯದ ‘ಸ್ಪೆಷಲ್ 26’ ಚಿತ್ರದ ಕಥಾಚಿತ್ರದಂತೆ, ಆದಾಯ ತೆರಿಗೆ ಅಧಿಕಾರಿಗಳ ಸೋಗಿನಲ್ಲಿ ಪಾಲ್‌ಗಂಜ್‌ ಮತ್ತು ಕೋಯಲದೇವ ಬಜ಼ಾರ್‌‌ನ ಆಭರಣದಂಗಡಿಗಳ ಮೇಲೆ ನಕಲಿ ದಾಳಿ ಮಾಡಿದ ಕಳ್ಳರ ಗುಂಪೊಂದು 4.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳ ಜೊತೆಗೆ ಪರಾರಿಯಾಗಿದೆ.

ಬೈಕೊಂದರಲ್ಲಿ ನೀಲಿ ಬಣ್ಣದ ಸಫಾರಿ ಧರಿಸಿ ಬಂದ ದುಷ್ಕರ್ಮಿಗಳು ಶಂಕರ್‌ ಸೋನಿ ಎಂಬವರ ಆಭರಣದಂಗಡಿ ಪ್ರವೇಶಿಸಿ ಅಂಗಡಿ ಮಾಲೀಕನಿಗೆ ತನಿಖೆ ಗೆಂದು ಆಭರಣ ತೋರಲು ತಿಳಿಸಿದ್ದಾರೆ. ಈ ವೇಳೆ ಮಾಲೀಕನಿಗೆ ಬೆದರಿಕೆಯೊಡ್ಡಿದ ಕಳ್ಳರು ಆತನಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಪರಿಶೀಲನೆ ನೆವದಲ್ಲಿ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮತ್ತೊಂದು ಆಭರಣದಂಗಡಿಯಲ್ಲಿ ಹೀಗೇ ದಾಳಿ ಮಾಡಿ ಅಲ್ಲಿಂದಲೂ 1.5 ಲಕ್ಷ ರೂಪಾಯಿಗಳನ್ನು ಕಳ್ಳರು ದೋಚಿ ಪರಾರಿಯಾಗಿದ್ದಾರೆ. ಅಂಗಡಿಗಳ ಮಾಲೀಕರು ವಿಷಯವನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ತಿಳಿಸಿದ್ದಾರೆ.