2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಸಂವಿಧಾನದ 370ನೇ ವಿಶೇಷ ಕಲಂ ರದ್ದು ಗೊಳಿಸಿದ ನಂತರ ನಡೆಯುತ್ತಿರುವ ಮೊದಲ ಜಾಗತಿಕ ಕಾರ್ಯಕ್ರಮ ಇದಾಗಿದೆ. ಆದ್ದರಿಂದ ಕಣಿವೆ ನಾಡಿನಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲೆಡೆಯೂ ಭದ್ರತಾ ಸಿಬ್ಬಂದಿ ಹದ್ದಿನ ಕಣ್ಣಿಟ್ಟು ಕಾವಲು ಕಾಯುತ್ತಿದ್ದಾರೆ.
ಭಯೋತ್ಪಾದಕ ಚಟುವಟಿಕೆ ಪೀಡಿತ ನಾಡಿನಲ್ಲಿ ಜಿ20 ಸಭೆಗಳನ್ನು ಸುಗಮವಾಗಿ ನಡೆಸು ವುದು ಕೇಂದ್ರ ಸರ್ಕಾರಕ್ಕೆ ಮಹತ್ವದ್ದಾಗಿದೆ. ಇತ್ತೀಚಿಗೆ ಉಗ್ರ ಚಟುವಟಿಕೆಗಳೂ ಹೆಚ್ಚಾಗಿವೆ. ಇದು ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ತೊಡಗಿ ರುವ ಭದ್ರತಾ ಏಜೆನ್ಸಿಗಳ ಕಳವಳಕ್ಕೆ ಕಾರಣವಾಗಿದೆ.
ಅಂತಾರಾಷ್ಟ್ರೀಯ ಗಡಿ ಮತ್ತು ನಿಯಂತ್ರಣ ರೇಖೆಯುದ್ದಕ್ಕೂ ಕಟ್ಟೆಚ್ಚರ ಹೆಚ್ಚಿಸಲಾಗಿದೆ. ಪಠಾಣ್‌ಕೋಟ್ – ಜಮ್ಮು ಮತ್ತು ಜಮ್ಮು – ಪೂಂಚ್ ಮತ್ತು ಜಮ್ಮು – ಶ್ರೀನಗರ – ಗಂದರ್ ಬಲ್ ರಾಷ್ಟ್ರೀಯ ಹೆದ್ದಾರಿಗಳ ನಿರ್ದಿಷ್ಟ ಸ್ಥಳಗಳಲ್ಲಿ ವಿಶೇಷ ನಾಕಾಗಳನ್ನೂ ಸ್ಥಾಪಿಸ ಲಾಗಿದೆ.
ಜಿ20 ಸಮ್ಮೇಳನದ ಸ್ಥಳವನ್ನು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಇಲಾಖೆಯ ಎನ್‌ಎಸ್‌ಜಿ ಮತ್ತು ವಿಶೇಷ ಕಾರ್ಯಾಚರಣೆ ಗುಂಪು (ಎಸ್‌ಒಜಿ) ಕಮಾಂಡೋಗಳು ಸ್ವಾಧೀನಪಡಿಸಿಕೊಂಡಿದ್ದಾರೆ. ಸಿಆರ್‌ಪಿಎಫ್‌ನ ವಾಟರ್ ವಿಂಗ್ ಮತ್ತು ನೌಕಾಪಡೆಯ ಮಾರ್ಕೋಸ್ ಸ್ಕ್ವಾಡ್‌ನ ಕಮಾಂಡೋಗಳು ತಮ್ಮ ದೋಣಿಗಳಲ್ಲಿ ದಾಲ್ ಸರೋವರದಲ್ಲಿ ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಯಾವುದೇ ಅಪಾಯವನ್ನು ಎದುರಿಸಲು ನೆಲ, ಜಲ ಮತ್ತು ವಾಯು ಮೂಲಕ ಕಣ್ಗಾವಲು ಇರಿಸಲಾಗಿದೆ.
ಮೇ 22ರಿಂದ ಪ್ರಾರಂಭವಾಗುವ ಮೂರು ದಿನಗಳ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿದೇಶಿ ಅತಿಥಿಗಳು ಭಾನುವಾರದಿಂದಲೇ ಆಗಮಿಸಲಿದ್ದಾರೆ.