Sunday, 15th December 2024

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ರೆಡ್ಡಿಗೆ ಐಟಿ ಬಿಸಿ

ಹೈದರಾಬಾದ್: ಇದೇ 30 ರಂದು ನಡೆಯಲಿರುವ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಪಲೈರ್ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಫರ್ಧಿಸಿರುವ ಶ್ರೀನಿವಾಸ್ ರೆಡ್ಡಿ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಐಟಿ ದಾಳಿ ಖಂಡಿಸಿ ಕಾಂಗ್ರೆಸ್ ನಾಯಕನ ಅನುಯಾಯಿಗಳು ಖಮ್ಮಂನಲ್ಲಿ ಪ್ರತಿಭಟಿಸಿ ಘೋಷಣೆಗಳನ್ನು ಕೂಗಿದರು. ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದಂತಹ ಕೇಂದ್ರ ಏಜೆನ್ಸಿಗಳು ತನ್ನನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಬಹುದು ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.

ಕೇಂದ್ರ ಏಜೆನ್ಸಿಗಳು ಕಾಂಗ್ರೆಸ್ ನಾಯಕರ ಮೇಲೆ ತಮ್ಮ ಮನೆ ಶೋಧನೆಯನ್ನು ಕೇಂದ್ರೀಕರಿಸುತ್ತಿವೆ ಎಂದು ರೆಡ್ಡಿ ಆರೋಪಿಸಿದ್ದಾರೆ. ತೆಲಂಗಾಣದಲ್ಲಿ ಆಡಳಿತಾರೂಢ ಬಿಆರ್‍ಎಸ್ ಸರ್ಕಾರ ಮತ್ತು ಬಿಜೆಪಿ ನಾಯಕರುಗಳು ಕಾಂಗ್ರೆಸ್ ಪಕ್ಷದ ನಾಯಕರ ಮೇಲಿನ ದಾಳಿಯಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಕೇಂದ್ರ ತನಿಖಾ ತಂಡಗಳು ನನಗೆ ಮತ್ತು ನನ್ನ ಕಂಪನಿಗಳಿಗೆ ತೊಂದರೆ ಉಂಟುಮಾಡುವ ಕಾರಣ ಯಾವುದೇ ಚಟುವಟಿಕೆಯನ್ನು ಆಶ್ರಯಿಸದಂತೆ ನಾನು ವಿನಂತಿಸುತ್ತೇನೆ ಎಂದು ರೆಡ್ಡಿ ತಮ್ಮ ಅನುಯಾಯಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಕಳೆದ ವಾರ ಮಹೇಶ್ವರಂ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ ಲಕ್ಷ್ಮಾ ರೆಡ್ಡಿ ಮತ್ತು ಬಡಂಗ್‍ಪೇಟೆ ಮಹಾನಗರ ಪಾಲಿಕೆ ಮೇಯರ್ ಚಿಗುರಿಂಥ ಪಾರಿಜಾತ ನರಸಿಂಹ ರೆಡ್ಡಿ ಅವರ ನಿವಾಸಗಳಲ್ಲಿ ಐಟಿ ಅಧಿಕಾರಿಗಳು ತಪಾಸಣೆ ನಡೆಸಿದ್ದರು