Saturday, 14th December 2024

ಸ್ಟಾಂಡ್​ಅಪ್​ ಕಾಮೆಡಿಯನ್ ಮುನಾವರ್ ಫಾರುಖಿಗೆ ಮಧ್ಯಂತರ ಜಾಮೀನು

ನವದೆಹಲಿ: ಹಿಂದೂ ದೇವತೆಗಳ ವಿರುದ್ದ ಅವಮಾನಕಾರಿ ಮಾತುಗಳನ್ನಾಡಿದ ಆರೋಪ ಎದುರಿಸುತ್ತಿರುವ ಸ್ಟಾಂಡ್​ಅಪ್​ ಕಾಮೆಡಿಯನ್ ಮುನಾವರ್ ಫಾರುಖಿಗೆ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿದೆ.

ಫಾರುಖಿ ಮೇಲೆ ಹಿಂದೂ ದೇವತೆಗಳ ಮೇಲೆ ಅವಮಾನಕಾರಿ ಮಾತುಗಳನ್ನು ಆಡಿದ ಆರೋಪವಿದೆ. ಹೊಸ ವರ್ಷದ ದಿನ ಇಂದೋರಿನ ರೆಸ್ಟೋರೆಂಟಲ್ಲಿ ನಡೆದ ಫಾರುಖಿಯ ಕಾಮೆಡಿ ಶೋಗೆ ಸಂಬಂಧಪಟ್ಟಂತೆ ಜನವರಿ 2 ರಂದು ಫಾರುಖಿ ಮತ್ತು ಇತರ ನಾಲ್ವರನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದರು.

ಫಾರುಖಿ ಜಾಮೀನು ಅರ್ಜಿಯನ್ನು ಸೆಷನ್ಸ್​ ನ್ಯಾಯಾಲಯ ನಿರಾಕರಿಸಿದ್ದು, ನಂತರ ಜನವರಿ 28 ಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೂಡ ಜಾಮೀನು ನಿರಾಕರಿಸಿತ್ತು. ಫಾರುಖಿ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಶುಕ್ರವಾರ ಫಾರುಖಿಗೆ ಮಧ್ಯಂತರ ಜಾಮೀನು ನೀಡಿದೆ.

ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆಯನ್ನು ಸರಿಯಾಗಿ ಪಾಲಿಸಿಲ್ಲ ಎಂಬ ಫಾರುಖಿ ವಕೀಲರ ವಾದವನ್ನು ಕೇಳಿದ ನ್ಯಾಯಮೂರ್ತಿ ಆರ್.ಎಫ್. ನಾರಿಮನ್ ಮತ್ತು ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರನ್ನೊಳಗೊಂಡ ನ್ಯಾಯಪೀಠವು, ಮಧ್ಯಪ್ರದೇಶ ಸರ್ಕಾರಕ್ಕೆ ನೋಟೀಸು ಜಾರಿ ಮಾಡಿದೆ.