Saturday, 14th December 2024

ಭಾರತೀಯ ವಾಯುಸೇನೆಯ ಕಾಂತಿ ಭಾವನಾ ಕಾಂತ್‌

ವಾರದ ತಾರೆ: ಭಾವನಾ ಕಾಂತ್

ವಿಶೇಷ ಲೇಖನ: ವಿರಾಜ್ ಕೆ.ಅಣಜಿ

ಗಣರಾಜ್ಯೋತ್ಸವ ಪರೇಡ್ ನೋಡುವುದೇ ರೋಮಾಂಚನ. ನಾನು, ನನ್ನದು ಎಂಬ ಗುಂಗಲ್ಲಿರುವ ನಮಗೆ, ಭಾರತ, ಭಾರತೀಯತೆ, ಭಾರತಕ್ಕಾಗಿ ಪ್ರಾಣ ಮುಡಿಪಿಟ್ಟವರಿಗೆ ಕೃತಜ್ಞರಾಗಿರಿ ಎಂದು ಜಾಗೃತಿ ಹೆಚ್ಚಿಸುವ ದಿನವದು. ಈ ವರ್ಷದ ಪರೇಡ್ ಕೂಡ ಅದಕ್ಕೆ ಹೊರತಾಗಿರಲಿಲ್ಲ.

ಆ ಪರೇಡ್‌ನಲ್ಲಿ ಭಾರತದ ಧ್ವಜಕ್ಕೆ ಸೆಲ್ಯೂಟ್ ಮಾಡಿ ನಿಂತಿದ್ದ ಮಹಿಳೆಯೊಬ್ಬರು ಭಾರತದ ಹೆಮ್ಮೆಯಂತೆ ಕಂಗೊಳಿಸಿದರು, ಎಷ್ಟೋ ಕೋಟಿ ಮಹಿಳೆಯರ ಭಾವನೆಗಳ ಪ್ರತಿರೂಪದಂತೆ ಕಂಡರು, ಅವರೇ ಭಾವನಾ ಕಾಂತ್, ಭಾರತೀಯ ವಾಯು ಸೇನೆಯ ಯುದ್ಧವಿಮಾನಗಳ ಮೊದಲ ಮಹಿಳಾ ಪೈಲಟ್.

ಭಾವನಾ ಅವರ ಸೆಲ್ಯೂಟ್ ನೋಡಿದಾಗ, ನಮ್ಮನ್ನೊಮ್ಮೆ ಅವರ ಜಾಗದಲ್ಲಿ ಕಲ್ಪನೆ ಮಾಡಿಕೊಳ್ಳದೇ ಇರಲಾಗಲಿಲ್ಲ. ಹಾಗಿತ್ತು ಆ ಕ್ಷಣ. ಇಂದಿಗೂ ಭಾರತದಲ್ಲಿ ಎಷ್ಟೋ ಹೆಣ್ಣು ಮಕ್ಕಳಿಗೆ ಹೊತ್ತಿನ ಊಟವಿಲ್ಲ, ಒಬ್ಬರೇ ಹೊರ ಹೋಗಿ ಬಂದರೆ ಸುರಕ್ಷಿತವಾಗಿ ವಾಪಸ್ ಬರುತ್ತೇವೆ ಎಂಬ ಸಂಪೂರ್ಣ ವಿಶ್ವಾಸವಿಲ್ಲ. ಅದೂ
ಹೋಗಲಿ, ಎಷ್ಟೋ ಮನೆ ಯಲ್ಲಿ ಹೆಣ್ಣುಮಕ್ಕಳಿಗೆ ಕನಿಷ್ಠ ಗೌರವ ಕೊಡದಂಥ ದು:ಸ್ಥಿತಿ ಇದೆ.

ಇಂಥ ಕಾಲಘಟ್ಟದಲ್ಲೇ ಕೆಲ ಮಹಿಳೆಯರು ತೋರುವ ಅಪ್ರತಿಮ ಧೀಶಕ್ತಿಗೆ ಮನಸ್ಸು ತಲೆಬಾಗುತ್ತದೆ. ಅಂತಹ ಗರವಕ್ಕೆ ಭಾವನಾ ಕಾಂತ್ ಕೂಡ ಅರ್ಹರು. ಭಾವನಾ ಬಿಹಾರದ ಧರ್ಬಾಂಗ್ ಮೂಲದವರು. ಅವರದ್ದು ಮಧ್ಯಮ ವರ್ಗದ ಕುಟುಂಬ. ತಂದೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಲ್ಲಿ ಎಂಜಿನಿಯರ್, ತಾಯಿ ಗೃಹಿಣಿ ಆಗಿದ್ದವರು. ಖೊಖೋ, ಬ್ಯಾಡ್ಮಿಂಟನ್, ಈಜು, ಪೇಂಟಿಂಗ್ ನಂಥ ಹವ್ಯಾಸ ಹೊಂದಿದ್ದ ಭಾವನಾಗೆ ಚಿಕ್ಕ ವಯಸ್ಸಿನಿಂದಲೂ ತಾನೊಬ್ಬ ಪೈಲಟ್ ಆಗಬೇಕು ಎಂಬ ಹಂಬಲವಿತ್ತು. ಅದರಲ್ಲೂ ಯುದ್ಧ ವಿಮಾನ ಗಳ ಪೈಲಟ್ ಆಗಬೇಕು ಎಂಬ ಕನಸಿತ್ತು.

ಭಾವನಾ ಅವರ ನೆರೆಮನೆಯಲ್ಲಿದ್ದ ಮನಸ್ ಬಿಹಾರಿ ವರ್ಮಾ ವೈಮಾನಿಕ ತಂತ್ರಜ್ಞರಾಗಿ ಕೆಲಸ ಮಾಡು ತ್ತಿದ್ದರು. ತೇಜಸ್ ಯುದ್ಧ ವಿಮಾನಗಳ ಅಭಿವೃದ್ಧಿಯಲ್ಲಿ ಅವರ ಪಾತ್ರವೂ ದೊಡ್ಡದಿತ್ತು. ಚಿಕ್ಕಂದಿನಿಂದ ಮನಸ್ ಅವರನ್ನು ನೋಡಿ ಬೆಳೆದಿದ್ದರಿಂದಲೇ ತಾನು ಯುದ್ಧ ವಿಮಾನಗಳ ಪೈಲಟ್ ಆಗಬೇಕು ಎಂಬ ಹಂಬಲ, ಹಟಕ್ಕೆ ಭಾವನಾ ಬಿದ್ದಿದ್ದರು.

ತನ್ನೆಲ್ಲ ಸಹಪಾಠಿಗಳಂತೆ ಶಿಕ್ಷಣ ಪಡೆದ ಭಾವನಾ, ಬೆಂಗಳೂರಿನ ಬಿಎಂಎಸ್ ಕಾಲೇಜಿನಲ್ಲಿ ಎಂಜಿನಿಯರಿಂಗ್
ಪದವಿ ಪಡೆದರು. ಓದಿಗೆ ತಕ್ಕನಾದ ಕೆಲಸವನ್ನು ಪ್ರತಿಷ್ಠಿತ ಟಾಟಾ ಕನ್ಸಲ್ಟೆನ್ಸಿ ಸರ್ವೀಸ್‌ನಲ್ಲಿ ಪಡೆದರು, ಸಂಬಳವೂ ಚೆನ್ನಾಗಿತ್ತು. ಆದರೆ, ಭಾವನಾ ಅವರೊಳಗಿದ್ದ ‘ಹಾರುವ ಹಕ್ಕಿ’ ಅವರನ್ನು ಅಲ್ಲಿರಲು ಬಿಡಲಿಲ್ಲ. ಕೊನೆಗೆ ಬರುತ್ತಿದ್ದ ಸಂಬಳ, ಇದ್ದ ಕೆಲಸ ಬಿಟ್ಟರು.

ಭಾರತೀಯ ವಾಯು ಸೇನೆ ನಡೆಸುವ ಸಾಮಾನ್ಯ ಪ್ರವೇಶಾತಿ ಪರೀಕ್ಷೆ ಬರೆದು ಸೇನಾ ಸಮವಸ್ತ್ರ ಧರಿಸಿದರು.
ಅದು ಅವರ ಕನಸಿನ ಹಾದಿಯ ಮೊದಲ ಹೆಜ್ಜೆ ಯಾಗಿತ್ತು. ಆದರೆ, ಹಾದಿ ಸುಗಮವಾಗಿರಲಿಲ್ಲ. ಏಕೆಂದರೆ, ಮಹಿಳೆಯೊಬ್ಬರು ಯುದ್ಧ ವಿಮಾನಗಳ ಪೈಲಟ್ ಆಗುತ್ತಿರುವುದೇ ಇದೇ ಮೊದಲ ಬಾರಿ ಆಗಿತ್ತು. ಅದಕ್ಕೆ ಕೇಂದ್ರ ಮತ್ತು ಸೇನೆಯ ಮಟ್ಟದಲ್ಲಿ ಮಹತ್ವದ ಬದಲಾವಣೆ ಮತ್ತು ನಿರ್ಧಾರಗಳು ಆಗಬೇಕಿದ್ದವು.

ಪೈಲಟ್ ಆಗಲು ಬೇಕಾದ ಕೌಶಲ್ಯ, ಚಾಕಚಕ್ಯತೆ, ಪುರುಷರಷ್ಟೇ ದೈಹಿಕ ಸಾಮರ್ಥ್ಯಗಳನ್ನು ಸಿದ್ಧಿಸಿ ಕೊಳ್ಳಬೇಕಿತ್ತು. ಅದಕ್ಕಾಗಿ ಭಾವನಾ ಎಲ್ಲ ಸುಖಗಳನ್ನು ತ್ಯಜಿಸಿದ್ದರು. ತನ್ನ ವಾರಿಗೆಯ ಹುಡುಗಿಯರು ಅಂದ ಚೆಂದವಾಗಿ ಕಾಲ ಕಳೆಯುವ ಸಮಯದಲ್ಲಿ, ಪೈಲಟ್ ಆಗಲೇಬೇಕು ಎಂಬ ಕನಸಿಗೆ ಭಾವನಾ ನೀರೆರೆಯು ತ್ತಿದ್ದರು.

ನಮಗೆ ಗೊತ್ತಿರುವಂತೆ ಸೇನೆಯಲ್ಲಿ ನಿಯಮಗಳಿಗೆ ಎಲ್ಲಿಲ್ಲದ ಮಹತ್ವ. ಕೊಟ್ಟ ಟಾರ್ಗೆಟ್ ಮುಟ್ಟಿದವರಿ ಗಷ್ಟೇ ಮಣೆ. ಅದೆಲ್ಲವನ್ನು ಭಾವನಾ ಸಾಧಿಸಿ ನಿಂತಿದ್ದರು. ಸತತ ಎರಡು ವರ್ಷಗಳ ಕಠಿಣಾತಿ ಕಠಿಣ ತರಬೇತಿ ನಂತರ ಯುದ್ಧ ವಿಮಾನಗಳಿಗೆ ಮೊಟ್ಟ ಮೊದಲ ಬಾರಿಗೆ ಮಹಿಳಾ ಪೈಲಟ್‌ಗಳ ನೇಮಕ ಮಾಡಲು 2016ರಲ್ಲಿ  ಭಾರತ ಸರಕಾರ ಅನುಮತಿ ನೀಡಿತ್ತು. ಆ ಕ್ಷಣ ಭಾವನಾ ಕಂಡ ಕನಸು ನಿಜವಾಗಿತ್ತು.

IAF Pilot ಎಂಬ ಬ್ಯಾಡ್ಜನ್ನು ಎದೆಮೇಲೆ ಹಮ್ಮೆಯಿಂದ ಹಾಕಿಕೊಂಡಿದ್ದರು. ಭಾವನಾ ಜತೆಗೆ ಅವನಿ
ಚತುರ್ವೇದಿ, ಮೋಹನಾ ಸಿಂಗ್ ಕೂಡ ಪೈಲಟ್ ಗಳಾಗಿ ನೇಮಕವಾದರು. 2017ರಲ್ಲಿ ಫೈಟರ್ ತಂಡಕ್ಕೆ ಸೇರ್ಪಡೆಯಾದರು, 2018ರಲ್ಲಿ ಪ್ರಥಮ ಬಾರಿಗೆ ಮಿಗ್21 ಬಿಸೊನ್ ಯುದ್ಧ ವಿಮಾನವನ್ನು ಭಾವನಾ ಯಶಸ್ವಿಯಾಗಿ ಬಾನಂಗಳದಲ್ಲಿ ಹಾರಾಡಿಸಿದ್ದರು. 2019ರಲ್ಲಿ ಯುದ್ಧ ಕಾರ್ಯಾಚರಣೆಯಲ್ಲಿ ಭಾಗವಹಿಸುವ ಅನುಮತಿ ಪಡೆದರು.

2020ರ ಮಾರ್ಚ್‌ನಲ್ಲಿ ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರಕ್ಕೂ ಪಾತ್ರರಾದರು. ಪ್ರಸ್ತುತ ರಾಜಸ್ಥಾನ ಸೇನಾ ವಾಯುನೆಲೆಯಲ್ಲಿ ಕರ್ತವ್ಯದಲ್ಲಿದ್ದಾರೆ. 2021ರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಿದ ಮೊದಲ ಮಹಿಳಾ ಪೈಲಟ್ ಎಂಬ ಕೀರ್ತಿಗೂ ಭಾವನಾ ಕಾಂತ್ ಪಾತ್ರರಾಗಿದ್ದಾರೆ. ಭಾವನಾ ತಮ್ಮ ಕನಸನ್ನಷ್ಟೇ ಸಾಧಿಸಿಲ್ಲ.  ಬದಲಾಗಿ ಲಕ್ಷಾಂತರ ಹೆಣ್ಣು ಮಕ್ಕಳಿಗೆ ತಾವೂ ಹೀಗಾಗಬಹುದು, ಹೀಗಾಗಬೇಕು ಎಂಬ ಸಾಧಿಸುವ ಕನಸನ್ನು ಬಿತ್ತಿದ್ದಾರೆ. ಅವರಿಗೊಂದು ಸೆಲ್ಯೂಟ್.