Tuesday, 19th November 2024

Stock Market: ಕೊನೆಗೂ ಸೆನ್ಸೆಕ್ಸ್‌, ನಿಫ್ಟಿ ಕುಸಿತಕ್ಕೆ ಬ್ರೇಕ್‌, ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಐಪಿಒ ಶುರು

Stock Market

ಮುಂಬೈ: ಮುಂಬಯಿ ಷೇರು ಮಾರುಕಟ್ಟೆ(Stock Market) ಸಂವೇದಿ ಸೂಚ್ಯಂಕಗಳು ಸತತ ನಾಲ್ಕು ದಿನಗಳ ನಿರಂತರ ಕುಸಿತದ ಬಳಿಕ ಕೊನೆಗೂ ಮಂಗಳವಾರ ಚೇತರಿಸಿತು. ಸೆನ್ಸೆಕ್ಸ್‌ 239 ಅಂಕಗಳ (Sensex today)ಏರಿಕೆ ದಾಖಲಿಸಿ 77,578ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 64 ಅಂಕಗಳ ಏರಿಕೆಯೊಂದಿಗೆ 23,518ಕ್ಕೆ ದಿನದಾಟ ಪೂರ್ಣಗೊಳಿಸಿತು.

ಎಲ್ಲ 13 ಪ್ರಮುಖ ವಲಯಗಳು ಲಾಭವನ್ನು ದಾಖಲಿಸಿತು. ವಿದೇಶಿ ಹೂಡಿಕೆಯ ಹೊರ ಹರಿವು ಮತ್ತು ಕಾರ್ಪೊರೇಟ್‌ ಫಲಿತಾಂಶದ ಕುರಿತ ಕಳವಳದ ನಡುವೆಯೂ ಸೂಚ್ಯಂಕಗಳ ಕುಸಿತಕ್ಕೆ ಬ್ರೇಕ್‌ ಬಿದ್ದಿತು. ಫೆಡರಲ್‌ ಬ್ಯಾಂಕ್‌ ( 206 ರೂ.), ಇಂಡಿಯನ್‌ ಹೋಟೆಲ್ಸ್‌ ಕಂಪನಿ (754 ರೂ.), ಫೋರ್ಟಿಸ್‌ ಹೆಲ್ತ್‌ಕೇರ್‌ (657 ರೂ.), ಆದಿತ್ಯಾ ಬಿರ್ಲಾ ಸನ್‌ಲೈಫ್‌ (819 ರೂ.) ಷೇರು ಲಾಭ ಗಳಿಸಿತು. ಬೆಳಗ್ಗೆ 11.36ರ ವೇಳೆಗೆ ಸೆನ್ಸೆಕ್ಸ್‌ 1000 ಅಂಕಗಳ ಏರಿಕೆ ದಾಖಲಿಸಿದರೆ, ನಿಫ್ಟಿ 304 ಅಂಕ ಚೇತರಿಸಿತ್ತು. ನಂತರ ಇಳಿದರೂ. ಅಂತಿಮವಾಗಿ ಏರಿಕೆಯೊಂದಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು.

ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಐಪಿಒ:

ಬಹು ನಿರೀಕ್ಷಿತ ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಕಂಪನಿಯ ಐಪಿಒ ( NTPC Green Energy IPO) ನವೆಂಬರ್‌ 19ರ ಮಂಗಳವಾರ ಆರಂಭವಾಗಿದೆ. ಐಇಒಗೆ ಮುನ್ನ ಆ್ಯಂಕರ್‌ ಇನ್ವೆಸ್ಟ್ರರ್‌ಗಳಿಂದ 3,960 ಕೋಟಿ ರೂ.ಗಳನ್ನು ಕಂಪನಿ ಸ್ವೀಕರಿಸಿದೆ. ಐಪಿಒ ಗಾತ್ರ 10,000 ಕೋಟಿ ರೂ.ಗಳಾಗಿದೆ.

ಈ ಐಪಿಒ ನವೆಂಬರ್‌ 22ರಂದು ಮುಕ್ತಾಯವಾಗಲಿದೆ. ಹೊಸ ಈಕ್ವಿಟಿ ಷೇರುಗಳನ್ನು ಮಾತ್ರ ಕಂಪನಿ ಬಿಡುಗಡೆಗೊಳಿಸಲಿದೆ. ಆಫರ್‌ ಫಾರ್‌ ಸೇಲ್‌ (OFS ) ಆಗಿರುವುದಿಲ್ಲ. ಐಪಿಒದಲ್ಲಿ ಪ್ರತಿ ಷೇರಿನ ದರ 102-108 ರೂ. ಶ್ರೇಣಿಯಲ್ಲಿ ಇರಲಿದೆ.

ಈ ಐಪಿಒದಲ್ಲಿ ಸಂಗ್ರಹವಾಗುವ ಬಹುಪಾಲು ಹಣವನ್ನು ಎನ್‌ಟಿಪಿಸಿ ಗ್ರೀನ್‌ ಎನರ್ಜಿಯು ತನ್ನ ಸಾಲಗಳನ್ನು ಮರು ಪಾವತಿಸಲು ಬಳಸಲಿದೆ. ಜತೆಗೆ ಹೊಸ ಯೋಜನೆಗಳಿಗೆ ಹೊಸತಾಗಿ ಸಾಲ ಪಡೆಯಲಿದೆ.
ಎನ್‌ಟಿಪಿಸಿ ಗ್ರೀನ್‌ ಎನರ್ಜಿಯು ಕೇಂದ್ರೀಯ ಸಾರ್ವಜನಿಕ ವಲಯದ ಸಂಸ್ಥೆಯಾಗಿದೆ. ಮಹಾರತ್ನ ಸ್ಥಾನಮಾನವನ್ನು ಹೊಂದಿದೆ. ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಯೋಜನೆಗಳನ್ನು ಹಮ್ಮಿಕೊಂಡಿದೆ. ಸೌರ ಶಕ್ತಿ ಮತ್ತು ಪವನ ಶಕ್ತಿ ಮೂಲಕ ವಿದ್ಯುತ್‌ ಉತ್ಪಾದಿಸುತ್ತಿದೆ. ಆರು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಎನ್‌ಟಿಪಿಸಿ 2032ರ ವೇಲೆಗೆ 60 ಗಿಗಾವ್ಯಾಟ್‌ ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಗಳಿಸುವ ಗುರಿಯನ್ನು ಹೊಂದಿದೆ. ಪ್ರಸ್ತುತ 3.5 ಗಿಗಾ ವ್ಯಾಟ್‌ ಸಾಮರ್ಥ್ಯವನ್ನು ಹೊಂದಿದೆ.

ಸಬ್‌ಸ್ಕ್ರೈಬ್‌ ಮಾಡಬಹುದೇ?

ಮಾರುಕಟ್ಟೆ ತಜ್ಞರ ಪ್ರಕಾರ ದೀರ್ಘಕಾಲೀನ ಹೂಡಿಕೆ ಮಾಡಲು ಬಯಸುವವರು ಎನ್‌ಟಿಪಿಸಿ ಗ್ರೀನ್‌ ಎನರ್ಜಿ ಐಪಿಒದಲ್ಲಿ ಭಾಗವಹಿಸಲು ಅರ್ಜಿ ಸಲ್ಲಿಸಬಹುದು. ಮೊದಲ ದಿನ 28% ಸಬ್‌ಸ್ಕ್ರೈಬ್‌ ಆಗಿದೆ. ಅನ್‌ಲಿಸ್ಟೆಡ್‌ ಮಾರ್ಕೆಟ್‌ನಲ್ಲಿ ಇದುವರೆಗಿನ ಜಿಎಂಪಿ 1 ರೂ. ಆಗಿದ್ದು, ಇಶ್ಶೂ ಪ್ರೈಸ್‌ಗಿಂತ 0.9% ಏರಿಕೆಯನ್ನು ಬಿಂಬಿಸಿದೆ.
ಸ್ವಾರಸ್ಯವೇನೆಂದರೆ ರಿಟೇಲ್‌ ಹೂಡಿಕೆದಾರರು ಈ ಐಪಿಒದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ. ಮಂಗಳವಾರ ಮಧ್ಯಾಹ್ನ 2 ಗಂಟೆಯ ವೇಳೆಗೆ ರಿಟೇಲ್‌ ಪೋರ್ಶನ್‌ ಸಂಪೂರ್ಣವಾಗಿ ಸಬ್‌ಸ್ಕ್ರೈಬ್‌ ಆಗಿತ್ತು.

ಈ ಸುದ್ದಿಯನ್ನೂ ಓದಿ: Stock Market: ನಿಫ್ಟಿ 10% ಕುಸಿತ, ಹೂಡಿಕೆದಾರರು ಏನು ಮಾಡಬಹುದು?