Thursday, 21st November 2024

Stock Market Crash: ಸೆನ್ಸೆಕ್ಸ್‌ 984 ಅಂಕ ಪತನ, ಹೂಡಿಕೆದಾರರಿಗೆ 6.8 ಲಕ್ಷ ಕೋಟಿ ರೂ. ನಷ್ಟ

Stock Market Crash

ಮುಂಬೈ: ಮುಂಬೈ ಷೇರು ಮಾರುಕಟ್ಟೆಯಲ್ಲಿ ಬುಧವಾರ (ನ. 13) ಸೂಚ್ಯಂಕ ಸೆನ್ಸೆಕ್ಸ್‌ 984 ಅಂಕಗಳ ಭಾರಿ ನಷ್ಟಕ್ಕೀಡಾಯಿತು. ಸೆನ್ಸೆಕ್ಸ್‌ 77,690 ಅಂಕಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಮತ್ತೊಂದು ಕಡೆ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 324 ಅಂಕ ನಷ್ಟದಲ್ಲಿ 23,559 ಅಂಕಗಳಿಗೆ ಕುಸಿತಕ್ಕೀಡಾಯಿತು. ದೇಶದಲ್ಲಿ ಹಣದುಬ್ಬರ ಹೆಚ್ಚಿರುವುದು ಹೂಡಿಕೆದಾರರನ್ನು ಕಂಗಾಲಾಗಿಸಿದೆ. ಹಣದುಬ್ಬರ ಹೆಚ್ಚಳವಾದರೆ ಬಡ್ಡಿ ದರ ಇಳಿಕೆ ಸದ್ಯಕ್ಕೆ ಇರದು ಎಂಬ ಆತಂಕ ಉಂಟಾಗಿದೆ. ಕಾರ್ಪೊರೇಟ್‌ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಕೂಡ ನಕಾರಾತ್ಮಕ ಪ್ರಭಾವ ಬೀರಿದೆ (Stock Market Crash).

ಬಿಎಸ್‌ಇನಲ್ಲಿ ನೋಂದಾಯಿತ ಎಲ್ಲ ಕಂಪೆನಿಗಳ ಮಾರುಕಟ್ಟೆ ಮೌಲ್ಯದಲ್ಲಿ 6.8 ಲಕ್ಷ ಕೋಟಿ ರೂ. ಇಳಿಕೆಯಾಗಿದ್ದು, 430 ಲಕ್ಷ ಕೋಟಿ ರೂ.ಗೆ ತಗ್ಗಿದೆ. ಎಚ್‌ಡಿಎಫ್‌ಸಿ ಬ್ಯಾಂಕ್‌, ರಿಲಯನ್ಸ್‌ ಇಂಡಸ್ಟ್ರೀಸ್‌, ಎಂ ಆ್ಯಂಡ್‌ ಎಂ, ಐಸಿಐಸಿಐ ಬ್ಯಾಂಕ್‌, ಎಲ್‌ & ಟಿ ಒಟ್ಟಾಗಿ ಸೆನ್ಸೆಕ್ಸ್‌ನಲ್ಲಿ 535 ಅಂಕ ಕುಸಿತಕ್ಕೆ ಕಾರಣವಾಯಿತು. ಎಸ್‌ಬಿಐ, ಟಿಸಿಎಸ್‌, ಎಕ್ಸಿಸ್‌ ಬ್ಯಾಂಕ್‌ ಮತ್ತು ಕೋಟಕ್‌ ಬ್ಯಾಂಕ್‌ ಷೇರುಗಳ ದರವೂ ಇಳಿಯಿತು.

ಸೆಕ್ಟರ್‌ಗಳ ಬಗ್ಗೆ ಹೇಳುವುದಿದ್ದರೆ, ನಿಫ್ಟಿ ಬ್ಯಾಂಕ್‌, ಆಟೊಮೊಬೈಲ್‌, ಲೋಹ, ಪಿಎಸ್‌ಯು ಬ್ಯಾಂಕ್‌ ಮತ್ತು ರಿಯಾಲ್ಟಿ ಸೆಕ್ಟರ್‌ಗಳ ಷೇರುಗಳು 2-3.2% ಇಳಿಕೆ ದಾಖಲಿಸಿತು. ಈ ನಡುವೆ ಇಂಡಿಯಾ ವಿಕ್ಸ್‌ ಸೂಚ್ಯಂಕ 5% ಏರಿಕೆ ದಾಖಲಿಸಿ ಮಾರುಕಟ್ಟೆಯ ಅನಿಶ್ಚಿತತೆಯನ್ನು ಬಿಂಬಿಸಿತು.

ಸೆನ್ಸೆಕ್ಸ್-ನಿಫ್ಟಿ ಭಾರಿ ಕುಸಿತಕ್ಕೆ ಕಾರಣವೇನು?

  1. ಹಣುದಬ್ಬರ 14 ತಿಂಗಳಿನಲ್ಲಿಯೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿರುವುದು: ಕಳೆದ ಅಕ್ಟೋಬರ್‌ನಲ್ಲಿ ಹಣದುಬ್ಬರ 6.21%ಕ್ಕೆ ಏರಿಕೆಯಾಗಿದೆ. ಸೆಪ್ಟೆಂಬರ್‌ನಲ್ಲಿ ಇದು 5.49%ರಷ್ಟಿತ್ತು. ತರಕಾರಿ ಮತ್ತು ಖಾದ್ಯ ತೈಲಗಳ ದರ ಜಿಗಿದಿರುವುದರಿಂದ ಹಣದುಬ್ಬರವೂ ಏರಿಕೆಯಾಗಿದೆ. ಹಣದುಬ್ಬರ ಏರಿಕೆಯಾದರೆ, ಡಿಸೆಂಬರ್‌ನಲ್ಲಿ ಆರ್‌ಬಿಐ ತನ್ನ ಬಡ್ಡಿ ದರಗಳನ್ನು ಕಡಿಮೆ ಮಾಡುವ ಸಾಧ್ಯತೆ ಕೂಡ ಕಡಿಮೆಯಾಗುತ್ತದೆ. ಈಗ ಹಣದುಬ್ಬರ ಆರ್‌ಬಿಐನ ಸುರಕ್ಷತಾ ಮಟ್ಟವನ್ನೂ ಮೀರಿದೆ. ಬಡ್ಡಿ ದರ ಕಡಿಮೆಯಾಗದಿದ್ದರೆ ಷೇರು ಮಾರುಕಟ್ಟೆಗೆ ಒತ್ತಡ ಹೆಚ್ಚುತ್ತದೆ.
  2. ವಿದೇಶಿ ಹೂಡಿಕೆ ಹಿಂತೆಗೆತ: ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಸತತ 32 ದಿನಗಳಿಂದ ಷೇರುಗಳನ್ನು ಮಾರಾಟ ಮಾಡುತ್ತಿದ್ದಾರೆ. 14 ಶತಕೋಟಿ ಡಾಲರ್‌ಗೂ ಹೆಚ್ಚಿನ ಹೊರ ಹರಿವು ಸಂಭವಿಸಿದೆ. ಇದು ಸೂಚ್ಯಂಕಗಳ ಕುಸಿತಕ್ಕೆ ಕಾರಣಗಳಲ್ಲೊಂದಾಗಿದೆ.
  3. ಡಾಲರ್‌ ಪ್ರಾಬಲ್ಯ: ಅಮೆರಿಕದಲ್ಲಿ ಬಾಂಡ್‌ ಗಳ ಉತ್ಪತ್ತಿ ಏರಿಕೆಯಾಗಿದ್ದು ಹೂಡಿಕೆದಾರರನ್ನು ಆಕರ್ಷಿಸಿದೆ. ಡಾಲರ್‌ ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿದೆ. 10 ವರ್ಷಗಳ ಅವಧಿಯ ಬಾಂಡ್‌ ಉತ್ಪತ್ತಿ 4.42%ಕ್ಕೆ ಏರಿಕೆಯಾಗಿದೆ. ಇದೂ ಭಾರತೀಯ ಷೇರು ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಗಿದೆ.
  4. ಚುನಾವಣೆ: ಮಹಾರಾಷ್ಟ್ರ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವುದರಿಂದ ಹೂಡಿಕೆದಾರರು ಎಚ್ಚರದ ನಡೆ ಅನುಸರಿಸುತ್ತಿದ್ದಾರೆ.
  5. ಹಣದುಬ್ಬರ: ಅಮೆರಿಕದ ಅಕ್ಟೋಬರ್‌ ತಿಂಗಳಿನ ಹಣದುಬ್ಬರ ಕುರಿತ ಅಂಕಿ ಅಂಶಗಳು ಪ್ರಕಟವಾಗಬೇಕಿದ್ದು, ಇದೂ ಷೇರು ಮಾರುಕಟ್ಟೆಯ ಮೇಲೆ ನಿರ್ಣಾಯಕ ಪ್ರಭಾವ ಬೀರಲಿದೆ.

ಈ ಸುದ್ದಿಯನ್ನೂ ಓದಿ: Swiggy IPO: ಸ್ವಿಗ್ಗಿಯ 500 ಉದ್ಯೋಗಿಗಳಿಗೆ ಕೋಟ್ಯಧಿಪತಿಯಾಗುವ ಸುವರ್ಣಾವಕಾಶ!