Friday, 15th November 2024

Stock Market Crash: ಸೆನ್ಸೆಕ್ಸ್‌, ನಿಫ್ಟಿ ನಿಲ್ಲದ ಕುಸಿತ; ಹೂಡಿಕೆದಾರರಿಗೆ 5.76 ಲಕ್ಷ ಕೋಟಿ ರೂ. ನಷ್ಟ: ಕಾರಣವೇನು?

Stock Market Crash

ಮುಂಬೈ: ಮುಂಬೈ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮತ್ತು ನ್ಯಾಶನಲ್‌ ಸ್ಟಾಕ್‌ ಎಕ್ಸ್‌ಚೇಂಜ್‌ (Stock Market Crash) ಸೂಚ್ಯಂಕ ನಿಫ್ಟಿ ಮಂಗಳವಾರ ಮತ್ತೆ ಭಾರಿ ಕುಸಿತಕ್ಕೀಡಾಗಿವೆ. ಸೆನ್ಸೆಕ್ಸ್‌ 821 ಅಂಕ ಕಳೆದುಕೊಂಡು 78,675ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 258 ಅಂಕ ಕುಸಿದು 23,883ಕ್ಕೆ ಸ್ಥಿರವಾಯಿತು. ಬ್ಯಾಂಕಿಂಗ್‌, ಹಣಕಾಸು, ಆಟೊಮೊಬೈಲ್‌ ಷೇರುಗಳು ನಷ್ಟಕ್ಕೀಡಾಯಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,306 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಕಾರ್ಪೊರೇಟ್‌ ವಲಯದ ತ್ರೈಮಾಸಿಕ ಫಲಿತಾಂಶಗಳು ಷೇರುಪೇಟೆಯನ್ನು ನಿರುತ್ಸಾಹಗೊಳಿಸಿವೆ.

ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್‌, ಏಷ್ಯನ್‌ ಪೇಂಟ್ಸ್‌, ಎಸ್‌ಬಿಐ, ಟಾಟಾ ಮೋಟಾರ್ಸ್‌ ಮತ್ತು ಮಾರುತಿ ಸುಜುಕಿ ಷೇರುಗಳು 2-3% ನಷ್ಟಕ್ಕೀಡಾಯಿತು. ಬಿಎಸ್‌ಇ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯದಲ್ಲಿ 5.76 ಲಕ್ಷ ಕೋಟಿ ರೂ. ಇಳಿಕೆಯಾಗಿದ್ದು, 436 ಲಕ್ಷ ಕೋಟಿ ರೂ.ಗೆ ತಗ್ಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದರಿಂದ ಸೂಚ್ಯಂಕಗಳು ಕುಸಿಯುತ್ತಿವೆ. ಮತ್ತೊಂದು ಕಡೆ ದೇಶೀಯ ಹೂಡಿಕೆದಾರರು ನಿರಂತರವಾಗಿ ಷೇರುಗಳನ್ನು ಖರೀದಿಸುತ್ತಿದ್ದಾರೆ.

ಷೇರು ಸೂಚ್ಯಂಕಗಳ ಪತನಕ್ಕೆ ಕಾರಣವೇನು?

  1. ಏಷ್ಯಾದ್ಯಂತ ಷೇರು ಮಾರುಕಟ್ಟೆಗಳಲ್ಲಿ ಸೂಚ್ಯಂಕಗಳು ಮಂಗಳವಾರ ಕುಸಿದಿವೆ: ಚೀನಾದಲ್ಲಿ ಸೆಮಿಕಂಡಕ್ಟರ್‌ ವಲಯದ ಷೇರುಗಳು ಮುಗ್ಗರಿಸಿತು. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ವಾಣಿಜ್ಯ ನೀತಿಗಳ ಬಗ್ಗೆ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಯಾಗಿದೆ. ಈ ನಡುವೆ ಬಿಟ್‌ ಕಾಯಿನ್‌ ದರ ದಾಖಲೆಯ 89,637 ಡಾಲರ್‌ಗೆ ಜಿಗಿದಿದೆ. ಹೀಗಿದ್ದರೂ, ಅಮೆರಿಕದಲ್ಲಿ ಟ್ರಂಪ್‌ ಅವರ ಎರಡನೇ ಆಡಳಿತಾವಧಿ ಬಗ್ಗೆ ವಿಶ್ವಾಸ ಉಂಟಾಗಿದೆ. ಟ್ರಂಪ್‌ ಅವರು ತೆರಿಗೆಗಳನ್ನು ಕಡಿತಗೊಳಿಸಲಿದ್ದಾರೆ. ಉದ್ದಿಮೆಗಳನ್ನು ಉತ್ತೇಜಿಸಲಿದ್ದಾರೆ ಎಂಬ ನಿರೀಕ್ಷೆ ಇದೆ.
  2. ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಮಾರಾಟ: ನ. 11ರಂದು ವಿದೇಶಿ ಸಾಂಸ್ಥಿಕ ಹೂಡಿಕೆದಾರರು 2,306 ಕೋಟಿ ರೂ. ಮೌಲ್ಯದಷೇರುಗಳನ್ನು ಮಾರಾಟ ಮಾಡಿದ್ದಾರೆ. ನವೆಂಬರ್‌ನಲ್ಲಿ ಎಫ್‌ ಐಐಗಳು 23,547 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಅಕ್ಟೋಬರ್‌ನಲ್ಲಿ 94,017 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದರು. ಇದು ದೇಶೀಯ ಷೇರು ಮಾರುಕಟ್ಟೆ ಮೇಲೆ ಒತ್ತಡ ಉಂಟು ಮಾಡಿದೆ.
  3. ತೈಲ ದರ ಏರಿಕೆ, ಚೀನಾ ಪ್ಯಾಕೇಜ್‌ ಕುರಿತ ಆತಂಕ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಮಂಗಳವಾರ ಸ್ವಲ್ಪ ಏರಿಕೆಯಾಗಿವೆ.ಪ್ರತಿ ಬ್ಯಾರೆಲ್‌ ತೈಲ ದರ 72.21 ಡಾಲರ್‌ಗೆ ಏರಿಕೆಯಾಗಿದೆ. ಮತ್ತೊಂದು ಕಡೆ ಚೀನಾದಲ್ಲಿ ಅಲ್ಲಿನ ಸರ್ಕಾರ ಆರ್ಥಿಕ ಬೆಳವಣಿಗೆಗೋಸ್ಕರ ಬಿಡುಗಡೆಗೊಳಿಸಿರುವ ನೆರವಿನ ಪ್ಯಾಕೇಜ್‌ ನಿರಾಸೆಗೊಳಿಸಿದೆ.
  4. ರೂಪಾಯಿ ದುರ್ಬಲ: ಡಾಲರ್‌ ಎದುರು ರೂಪಾಯಿ 84.41 ರೂ.ಗೆ ಕುಸಿದಿದೆ. ಬಹುತೇಕ ಎಲ್ಲ ಕರೆನ್ಸಿಗಳ ಎದುರು ಡಾಲರ್‌ ತನ್ನ ಪ್ರಾಬಲ್ಯವನ್ನು ಮೆರೆದಿದೆ. ಟ್ರಂಪ್‌ ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಡಾಲರ್‌ ಅಬ್ಬರ ಮುಂದುವರಿದಿದೆ.
  5. ಹಣದುಬ್ಬರ ಅಂಕಿ ಅಂಶ: ಭಾರತದಲ್ಲಿ ಅಕ್ಟೋಬರ್‌ ತಿಂಗಳಿನ ಹಣದುಬ್ಬರ ಅಂಕಿ ಅಂಶಗಳು ಮಾರುಕಟ್ಟೆ ಮೇಲೆ ಪ್ರಭಾವ ಬೀರುವ ನಿರೀಕ್ಷೆ ಇದೆ. ತಜ್ಞರ ಪ್ರಕಾರ ಇದು ಕಳೆದ 14 ತಿಂಗಳಿನಲ್ಲೇ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಲಿದೆ (5.8%).

ಏಷ್ಯನ್‌ ಪೇಂಟ್ಸ್‌ ಷೇರು ದರ 11% ಕುಸಿತ

ಪೇಂಟಿಂಗ್‌ ಉದ್ದಿಮೆ ವಲಯದ ಏಷ್ಯನ್‌ ಪೇಂಟ್ಸ್‌ (Asian paints) ಷೇರು ದರ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಕುಸಿಯುತ್ತಿದೆ. 2,476 ರೂ.ಗೆ ಇಳಿಕೆಯಾಗಿದೆ. ಕಳದ ಎರಡು ದಿನಗಳಲ್ಲಿ ಷೇರು ದರ 11% ಇಳಿಕೆಯಾಗಿದೆ. ಕಳೆದ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಏಷ್ಯನ್‌ ಪೇಂಟ್ಸ್‌ ಕಂಪೆನಿಯ ಲಾಭದಲ್ಲಿ 42% ಇಳಿಕೆಯಾಗಿದ್ದು, 1,205 ಕೋಟಿ ರೂ.ಗಳಿಂದ 694 ಕೋಟಿ ರೂ.ಗೆ ತಗ್ಗಿದೆ.

ಎಲ್‌ಐಸಿಯಿಂದ ಬುಕ್‌ ಪ್ರಾಫಿಟ್

ಭಾರತದ ಅತಿ ದೊಡ್ಡ ಸಾಂಸ್ಥಿಕ ಹೂಡಿಕೆದಾರ ಎಲ್‌ಐಸಿ, ಎನ್‌ಎಸ್‌ಇ ನೋಂದಾಯಿತ 100ಕ್ಕೂ ಹಚ್ಚು ಷೇರುಗಳಲ್ಲಿರುವ ತನ್ನ ಹೂಡಿಕೆಯನ್ನು ಮಾರಾಟ ಮಾಡಿ ಬುಕ್‌ ಪ್ರಾಫಿಟ್‌ ಮಾಡಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಎಲ್‌ಐಸಿಯು 103 ಷೇರುಗಳಿಂದ ತನ್ನ ಹೂಡಿಕೆಯನ್ನು ಕಡಿತಗೊಳಿಸಿದೆ. ಪ್ರಾಕ್ಟರ್‌ ಆಂಡ್‌ ಗ್ಯಾಂಬಲ್‌ ಹೈಜಿನ್‌ ಆಂಡ್‌ ಹೆಲ್ತ್‌ಕೇರ್‌, ವೋಲ್ಟಾಸ್‌, ಎಚ್‌ಡಿಎಫ್‌ಸಿ ಎಎಂಸಿ, ಲುಪಿನ್‌, ಹೀರೊ ಮೊಟೊ, ಎಚ್‌ಪಿಸಿಎಲ್‌, ಫೈಜರ್‌, ಟಾಟಾ ಕನ್‌ಸ್ಯೂಮ್‌ ಪ್ರಾಡಕ್ಸ್ಟ್‌ ಕಂನಿಗಳ ಷೇರುಗಳಲ್ಲಿನ ಹೂಡಿಕೆಯನ್ನು ಎಲ್‌ಐಸಿ ಮಾರಾಟ ಮಾಡಿದೆ.

ಹೂಡಿಕೆದಾರರು ಏನು ಮಾಡಬಹುದು?

ಕಳೆದ ನಾಲ್ಕು ವರ್ಷಗಳಿಂದ ಕಾರ್ಪೊರೇಟ್‌ ವಲಯದಲ್ಲಿ ಎರಡಂಕಿಯ ಬೆಳವಣಿಗೆ ಇತ್ತು. ಆದರೆ ಈ ವರ್ಷ ಲಾಭ ಕಡಿಮೆಯಾಗಿದೆ. ಹೀಗಿದ್ದರೂ, ಭಾರತದ ಆರ್ಥಿಕ ಬೆಳವಣಿಗೆ ಸದೃಢವಾಗಿದ್ದು, ಭವಿಷ್ಯದ ದಿನಗಳಲ್ಲಿ ಕಾರ್ಪರೇಟ್‌ ಕಂಪನಿಗಳ ಆದಾಯವೂ ಹೆಚ್ಚಲಿದೆ. ಹೀಗಾಗಿ ಹೂಡಿಕೆದಾರರು ದೀರ್ಘಕಾಲೀನ ಹೂಡಿಕೆಯನ್ನು ಮುಂದುವರಿಸಬಹುದು ಎನ್ನುತ್ತಾರೆ ತಜ್ಞರು.

ಈ ಸುದ್ದಿಯನ್ನೂ ಓದಿ: No Toll Tax: ವಾಹನ ಮಾಲಕರಿಗೆ ಗುಡ್‌ನ್ಯೂಸ್‌; 45 ದಿನಗಳ ಕಾಲ ಟೋಲ್‌ ಕಟ್ಟಬೇಕಾಗಿಲ್ಲ: ಯಾವಾಗಿನಿಂದ ಈ ಯೋಜನೆ? ಇಲ್ಲಿದೆ ವಿವರ