Friday, 25th October 2024

Stock Market Crash : ದೀಪಾವಳಿಗೆ ಮುನ್ನ ಷೇರು ಪೇಟೆಯಲ್ಲಿ ಬೆಳಕಿಲ್ಲ! ಭಾರಿ ಅಪಾಯದ ಮುನ್ಸೂಚನೆ?

Stock Market Crash

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸಂಭವಿಸಿದೆ. (Stock market crash) ಕಳೆದ ನಾಲ್ಕು ದಿನಗಳಿಂದ ಸೆನ್ಸೆಕ್ಸ್‌ (Sensex) ಮತ್ತು ನಿಫ್ಟಿ (Nifty) ತೀವ್ರ ಕುಸಿತಕ್ಕೆ ಸಾಕ್ಷಿಯಾಗಿದೆ. ಸೆನ್ಸೆಕ್ಸ್‌ 79,250 ಮತ್ತು ನಿಫ್ಟಿ 24,100 ಅಂಕಗಳ ಆಸುಪಾಸಿಗೆ ಇಳಿದಿದೆ. ಕಾರ್ಪೊರೇಟ್‌ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆಯಲ್ಲಿ ರಕ್ತದೋಕುಳಿಯನ್ನೇ ಸೃಷ್ಟಿಸಿದೆ. ಅಕ್ಟೋಬರ್‌ 25ರ ಶುಕ್ರವಾರ ಒಂದೇ ದಿನ ಹೂಡಿಕೆದಾರರಿಗೆ 8 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್‌ಇ ನೋಂದಾಯಿತ ಷೇರುಗಳ ಒಟ್ಟು ಮಾರುಕಟ್ಟೆ ಮೌಲ್ಯ 436 ಲಕ್ಷ ಕೋಟಿ ರೂ.ಗೆ ಕುಸಿದಿದೆ. ವಿದೇಶಿ ಹೂಡಿಕೆದಾರರು ನಿರಂತರವಾಗಿ ಹೂಡಿಕೆಯನ್ನುಹಿಂತೆಗೆದುಕೊಳ್ಳುತ್ತಿದ್ದಾರೆ. ದೇಶೀಯ ಹೂಡಿಕೆದಾರರು ಗಟ್ಟಿಯಾಗಿ ನಿಂತಿರುವ ಕಾರಣ, ಅನಾಹುತಕಾರಿ ಕುಸಿತಕ್ಕೆ ಬ್ರೇಕ್‌ ಸಿಕ್ಕಿದಂತಾಗಿದ್ದರೂ, ಹೊಸತಾಗಿ ಮಾರುಕಟ್ಟೆಗೆ ಪ್ರವೇಶಿಸಿರುವ ರಿಟೇಲ್‌ ಹೂಡಿಕೆದಾರರು ಕಂಗಾಲಾಗಿದ್ದಾರೆ. ಇದು ಭಾರಿ ಅಪಾಯದ ಮುನ್ಸೂಚನೆಯೇ? ಈಗ ಕಡಿಮೆ ಬೆಲೆಗೆ ಸಿಗುವ ಒಳ್ಳೆಯ ಷೇರುಗಳನ್ನು ಖರೀದಿಸಬಹುದೇ? ಈಗಾಗಲೇ ನಷ್ಟದಲ್ಲಿ ಇರುವರು ಏನು ಮಾಡಬಹುದು? ತಜ್ಞರು ಏನೆನ್ನುತ್ತಾರೆ? ಇಲ್ಲಿದೆ ವಿವರ.

ಹೊಸ ರಿಟೇಲ್‌ ಹೂಡಿಕೆದಾರರಲ್ಲಿ ಕಳವಳ ಉಂಟಾಗಲು ಕಾರಣವೂ ಇಲ್ಲದಿಲ್ಲ. ಕಳೆದ ಒಂದು ತಿಂಗಳಿನಿಂದ ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಸುಮಾರು 6% ಇಳಿಕೆ ದಾಖಲಿಸಿದೆ. ಸೆನ್ಸೆಕ್ಸ್‌ 5,450ಕ್ಕೂ ಹೆಚ್ಚು ಅಂಕಗಳ ಕುಸಿತ ದಾಖಲಿಸಿದೆ. ಸೆಪ್ಟೆಂಬರ್‌ 24ರಂದು ಸೆನ್ಸೆಕ್ಸ್‌ 84,900 ಅಂಕಗಳ ಎತ್ತರದಲ್ಲಿತ್ತು. ಷೇರುಪೇಟೆಗೆ ಈ ಅಕ್ಟೋಬರ್‌ ಕೇವಲ ಕೋವಿಡ್‌ ಬಿಕ್ಕಟ್ಟಿನ ಬಳಿಕದ ಕೆಟ್ಟ ತಿಂಗಳಾಗಿ ಉಳಿದಿಲ್ಲ. ಕಳೆದ ಹತ್ತು ವರ್ಷಗಳಲ್ಲಿಯೇ ದೀಪಾವಳಿಗೆ ಮುನ್ನ ನಿಫ್ಟಿಯ ಭಾರಿ ಕುಸಿತ ಇದಾಗಿದೆ. ಹೀಗಾಗಿ ಹೂಡಿಕೆದಾರರು ಕಳವಳಕ್ಕೀಡಾಗಿದ್ದಾರೆ.

ದೀಪಾವಳಿಗೆ ಮುನ್ನ ಷೇರು ಮಾರುಕಟ್ಟೆ ಹೇಗಿರುತ್ತದೆ?

ಸಾಮಾನ್ಯವಾಗಿ ದೀಪಾವಳಿಗೆ ಮುನ್ನ ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕಗಳು ಸಕಾರಾತ್ಮಕಾಗಿರುತ್ತವೆ. 2014ರಿಂದ ಇಲ್ಲಿಯವರೆಗೆ ಹತ್ತು ವರ್ಷಗಳಲ್ಲಿ ನಾಲ್ಕು ಸಲ ಮಾತ್ರ ನಿಫ್ಟಿ ದೀಪಾವಳಿಗೆ ಒಂದು ತಿಂಗಳಿರುವಾಗ ನೆಗೆಟಿವ್‌ ರಿಟರ್ನ್‌ ಕೊಟ್ಟಿದೆ. ಅದರಲ್ಲೂ 2015ರಲ್ಲಿ ನಿಫ್ಟಿ 4.5% ಕುಸಿದಿತ್ತು.

ಕಳೆದ 10 ವರ್ಷಗಳಲ್ಲಿ ದೀಪಾವಳಿಗೆ 1 ತಿಂಗಳಿಗೆ ಮುನ್ನ ಷೇರು ಮಾರುಕಟ್ಟೆ ಹೇಗೆ ವರ್ತಿಸಿತ್ತು ಎಂಬುದನ್ನು ನೋಡೋಣ.

2014 ರಲ್ಲಿ ದೀಪಾವಳಿಗೆ ಒಂದು ತಿಂಗಳಿರುವ ಮುನ್ನ ನಿಫ್ಟಿ ಸೂಚ್ಯಂಕವು -೦.೦% ರ ತಟಸ್ಥ ಮಟ್ಟದಲ್ಲಿತ್ತು. 2015ರಲ್ಲಿ -4.5% ಕುಸಿತ ಕಂಡಿತ್ತು. 2016ರಲ್ಲಿ 0.2% ಏರಿಕೆಯಾಗಿದ್ದರೆ, 2017ರಲ್ಲಿ -0.0% ಇಳಿಕೆಯಾಗಿತ್ತು. 2018ರಲ್ಲಿ 2.7%, 2019ರಲ್ಲಿ 1.0%, 2020ರಲ್ಲಿ 6.8 % ಮತ್ತು 2021ರಲ್ಲಿ 1.3% ಏರಿಕೆಯಾಗಿತ್ತು. 2022ರಲ್ಲಿ 2.3% ಏರಿಕೆಯಾಗಿದ್ದರೆ, 2023ರಲ್ಲಿ -1.4% ಇಳಿಕೆಯಾಗಿತ್ತು.

ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ ಕಾರಣವೇನು?

ಸೆನ್ಸೆಕ್ಸ್-ನಿಫ್ಟಿ ಕುಸಿತಕ್ಕೆ ದೇಶೀಯ ಹಾಗೂ ವಿದೇಶಿ ವಿದ್ಯಮಾನಗಳು ಪ್ರಮುಖ ಕಾರಣವಾಗಿದೆ. 2024-25ರ ಎರಡನೇ ತ್ರೈಮಾಸಿಕ, ಅಂದರೆ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಕಾರ್ಪೊರೇಟ್‌ ಕಂಪನಿಗಳ ತ್ರೈಮಾಸಿಕ ಆದಾಯ ಮಾರುಕಟ್ಟೆಯ ನಿರೀಕ್ಷೆಗೆ ತಕ್ಕಂತೆ ಇಲ್ಲದಿರುವುದು ಪ್ರಭಾವ ಬೀರಿದೆ.

ಎರಡನೆಯದಾಗಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಹೂಡಿಕೆಯನ್ನು ತೆಗೆದುಕೊಳ್ಳುತ್ತಿರುವುದು. ಹಾಗಂತ ಸೂಚ್ಯಂಕಗಳ ಕುಸಿತ ಭಾರತಕ್ಕೆ ಸೀಮಿತವಾಗಿಲ್ಲ. ನಾನಾ ಕಾರಣಗಳಿಂದ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಭಾರಿ ತಲ್ಲಣ ಉಂಟಾಗಿದೆ.

ಹಲವಾರು ಬ್ಲೂ-ಚಿಪ್‌ ಮತ್ತು ಇತರ ಕಂಪನಿಗಳ ಫಲಿತಾಂಶಗಳು ಹೂಡಿಕೆದಾರರನ್ನು ನಿರಾಸೆಗೀಡು ಮಾಡಿದೆ. ಇಂಡಸ್‌ ಇಂಡ್‌ ಬ್ಯಾಂಕ್‌ ಷೇರಿನ ದರವಂತೂ ಶುಕ್ರವಾರ ಒಂದೇ ದಿನ 19% ಪತನವಾಗಿತ್ತು.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FII) ಕಳೆದ 19 ದಿನಗಳಲ್ಲಿ ಷೇರುಗಳನ್ನು ಮಾರಿದ್ದಾರೆ. ಭಾರತದಿಂದ ಚೀನಾಕ್ಕೆ ಹೂಡಿಕೆಯನ್ನು ವರ್ಗಾಯಿಸುತ್ತಿದ್ದಾರೆ. ಅಕ್ಟೋಬರ್‌ 24ರ ವೇಳೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 98,085 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಿದ್ದಾರೆ. ಇಸ್ರೇಲ್ – ಇರಾನ್‌ ಸಂಘರ್ಷದಿಂದ ಉಂಟಾಗಿರುವ ಮಧ್ಯಪ್ರಾಚ್ಯದಲ್ಲಿನ ಬಿಕ್ಕಟ್ಟು, ಅಮೆರಿಕದ ಡಾಲರ್‌ ಮೌಲ್ಯ ಹೆಚ್ಚುತ್ತಿರುವುದು, ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅನಿಶ್ಚಿತತೆ ಕೂಡ ಮಾರುಕಟ್ಟೆ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.

ಇಂಡಸ್‌ ಇಂಡ್‌ ಬ್ಯಾಂಕ್‌ ಷೇರು 18% ಕುಸಿದಿದ್ದೇಕೆ?

ಇಂಡಸ್‌ ಇಂಡ್‌ ಬ್ಯಾಂಕ್‌ ಷೇರಿನ ದರ ಶುಕ್ರವಾರ 18% ಕುಸಿಯಿತು. (1,047 ರೂ.) ಇದಕ್ಕೆ ಪ್ರಮುಖ ಕಾರಣ ಬ್ಯಾಂಕ್‌ ಎರಡನೇ ತ್ರೈಮಾಸಿಕದಲ್ಲಿ ಗಳಿಸಿರುವ ನಿವ್ವಳ ಲಾಭದಲ್ಲಿ 39% ಕುಸಿತ ದಾಖಲಿಸಿರುವುದು. ಬ್ಯಾಂಕ್‌ 1,325 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2,138 ಕೋಟಿ ರೂ. ಲಾಭ ಗಳಿಸುವ ನಿರೀಕ್ಷೆ ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಬ್ಯಾಂಕ್‌ 2,181 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಇತ್ತೀಚೆಗೆ ರಿಟೇಲ್ ಹೂಡಿಕೆದಾರರಿಗೆ ಬಹುವಾಗಿ ಇಷ್ಟವಾಗಿದ್ದ ಷೇರುಗಳ ಬೆಲೆ ಕುಸಿದಿದೆ. ಉದಾಹರಣೆಗೆ ಪಿಎಸ್‌ಯು ಡಿಫೆನ್ಸ್‌ ಸ್ಟಾಕ್‌ ಆಗಿರುವ ಕೊಚ್ಚಿನ್‌ ಶಿಪ್‌ ಯಾರ್ಡ್‌ ಷೇರು ದರ 52 ವಾರಗಳ ಎತ್ತರದಿಂದ 52% ಇಳಿಕೆಯಾಗಿದೆ.

ಈಗ ಷೇರುಗಳನ್ನು ಖರೀದಿಸಬಹುದೇ?

ಭಾರತೀಯ ಷೇರು ಮಾರಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಇತ್ತೀಚೆಗೆ ಹೂಡಿಕೆಯನ್ನು ಹಿಂತೆಗೆದುಕೊಳ್ಳುತ್ತಿದ್ದರೂ, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಅಚಲವಾಗಿ ಮಾರುಕಟ್ಟೆಯ ಬೆನ್ನಿಗೆ ನಿಂತಿದ್ದಾರೆ. ಹೀಗಾಗಿ, ದೀರ್ಘಕಾಲೀನ ಹೂಡಿಕೆ ಮಾಡುವವರಿಗೆ ಷೇರು ಹೂಡಿಕೆ ಮಾಡಲು ಇದು ಸಕಾಲ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: Stock Market:‌ ದಾಖಲೆ ಬರೆದ ಸೆನ್ಸೆಕ್ಸ್‌, ನಿಫ್ಟಿ; ಷೇರು ಮಾರುಕಟ್ಟೆಯಲ್ಲಿ ಭಾರೀ ಸಂಚಲನ

ಷೇರು ಸೂಚ್ಯಂಕಗಳ ತಳಮಟ್ಟ ಯಾವುದು ಎಂಬುದನ್ನು ಗುರುತಿಸಲಾಗದು. ಆದರೆ ಮುಂದಿನ ಕೆಲವು ದಿನಗಳು ಅಥವಾ ವಾರಗಳ ಬಳಿಕ ತಳಮಟ್ಟದಿಂದ ಏರಿಕೆ ಕಾಣಬಹುದು ಎನ್ನುತ್ತಾರೆ ತಜ್ಞರು.

ಭಾರತದ ದೀರ್ಘಕಾಲೀನ ಆರ್ಥಿಕ ಬೆಳವಣಿಗೆ ಆಶಾದಾಯಕವಾಗಿದೆ. ಭಾರತ ಈಗ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ. ಹೀಗಾಗಿ ಸೂಚ್ಯಂಕಗಳು ಇಳಿಮುಖವಾಗಿದ್ದಾಗ ಉತ್ತಮ ಫಂಡಮೆಂಟಲ್‌ ಹೊಂದಿರುವ ಲಾರ್ಜ್‌ ಕ್ಯಾಪ್ ಷೇರುಗಳನ್ನು ಖರೀದಿಸಬಹುದು.‌ ಏಕೆಂದರೆ ಅವುಗಳ ಮೌಲ್ಯ ಈಗ ಖರೀದಿಗೆ ಆಕರ್ಷಕವಾಗಿ ಕಾಣಿಸುತ್ತಿದೆ. ಮುಂದಿನ 10 ವರ್ಷಗಳ ಕಾಲ ಭಾರತೀಯ ಸ್ಟಾಕ್‌ ಮಾರ್ಕೆಟ್‌ ಆಕರ್ಷವಾಗಿ ಇರಲಿದೆ ಎನ್ನುತ್ತಾರೆ ತಜ್ಞರು.