Thursday, 21st November 2024

Nitin Gadkari: ಶೀಘ್ರ ಭಾರತದಲ್ಲಿ ಡೀಸೆಲ್‌ ಕಾರುಗಳ ಯುಗಾಂತ್ಯ; ಸಚಿವ ನಿತಿನ್‌ ಗಡ್ಕರಿ ನೀಡಿದ ಸೂಚನೆ ಏನು?

Nitin Gadkari

ನವದೆಹಲಿ: ಡೀಸೆಲ್ (Diesel) ವಾಹನಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ (Nitin Gadkari) ದೇಶದ ಪ್ರಮುಖ ಕಾರು ತಯಾರಕ ಕಂಪನಿಗಳಿಗೆ ಸೂಚಿಸಿದ್ದಾರೆ. ಡೀಸೆಲ್ ವಾಹನಗಳ ಉತ್ಪಾದನೆಯನ್ನು ಶೀಘ್ರದಲ್ಲೇ ನಿಲ್ಲಿಸದಿದ್ದರೆ, ಅವುಗಳ ಮೇಲೆ ಭಾರಿ ತೆರಿಗೆಗಳನ್ನು ವಿಧಿಸುವುದಾಗಿ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.  ಜತೆಗೆ ಡೀಸೆಲ್‌ ವಾಹನಗಳ ಬಳಸದಂತೆಯೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪರಿಸರ ಮಾಲಿನ್ಯ ತಡೆಗೆ ಒತ್ತು

ಇಂಧನದಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಇಂಧನ ಆಮದಿನ ಮೇಲಿನ ಅವಲಂಬನೆಯನ್ನು ನಿಲ್ಲಿಸಲು ಗಡ್ಕರಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ಈ ಹಿನ್ನಲೆಯಲ್ಲಿ ಪರ್ಯಾಯ ಇಂಧನ ಬಳಕೆಗೆ ಒತ್ತು ನೀಡಲು ಕರೆ ನೀಡಿದ್ದಾರೆ. ಡೀಸೆಲ್ ವಾಹನಗಳ ಉತ್ಪಾದನೆ ಮತ್ತು ಬಳಕೆಯನ್ನು ಮತ್ತಷ್ಟು ಕಡಿಮೆ ಮಾಡಲು  ಹೆಚ್ಚುವರಿ ಶೇ. 10ರಷ್ಟು ಜಿಎಸ್‌ಟಿ ವಿಧಿಸಲು ಹನಕಾಸು ಸಚಿವರೊಂದಿಗೆ ಸಮಾಲೋಚನೆಯನ್ನೂ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಗಡ್ಕರಿ ತಮ್ಮ ಸ್ವಂತ ಕಾರಿಗೆ ಎಥೆನಾಲ್‌ನಿಂದ ಬಳಸುವುದಾಗಿ ಇದು ಇದು ಪೆಟ್ರೋಲ್‌ಗಿಂತ ಅಗ್ಗ ಎಂದು ಪ್ರತಿಪಾದಿಸಿದ್ದರು. ಪೆಟ್ರೋಲ್ ಬೆಲೆ ಲೀಟರ್‌ಗೆ 100 ರೂ.ಗಿಂತ ಹೆಚ್ಚಿದ್ದರೆ, ಎಥೆನಾಲ್ ಬೆಲೆ ಕೇವಲ 60 ರೂ.ಗೆ ಲಭ್ಯ ಎಂದು ತಿಳಿಸಿದ್ದರು. ಮುಂದಿನ 10 ವರ್ಷಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳನ್ನು ಹಂತಹಂತವಾಗಿ ಸ್ಥಗಿತಗೊಳಿಸಿ, ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ವ್ಯಾಪಕಗೊಳಿಸುವ ಯೋಜನೆ ಅವರದ್ದು. ಎಲೆಕ್ಟ್ರಿಕ್ ಸ್ಕೂಟರ್‌ಗಳು, ಕಾರುಗಳು ಮತ್ತು ಬಸ್ಸುಗಳು ಅತ್ಯುತ್ತಮ ಪರ್ಯಾಯವಾಗಿ ಹೊರ ಹೊಮ್ಮುತ್ತಿದೆ. ಎಲೆಕ್ಟ್ರಿಕ್‌ ವಾಹನದ ವೆಚ್ಚವು  ಡೀಸೆಲ್‌ಗಿಂತ ಗಮನಾರ್ಹವಾಗಿ ಕಡಿಮೆ ಎಂದು ಅವರು ವಿವರಿಸಿದ್ದಾರೆ. ದೇಶದಲ್ಲಿ ಡೀಸೆಲ್‌ ವಾಹನಗಳನ್ನು ನಿಷೇಧಿಸಬೇಕು ಎನ್ನುವುದನ್ನು ಗಡ್ಕರಿ ಅವರು ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದಾರೆ.

ದೇಶವನ್ನು ಹಸಿರು ಆರ್ಥಿಕತೆಯನ್ನಾಗಿ ಮಾಡಲು ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಸಂಪೂರ್ಣವಾಗಿ ತೊಡೆದುಹಾಕುವುದು ತಮ್ಮ ಗುರಿ ಎಂದು ಸಚಿವ ನಿತಿನ್ ಗಡ್ಕರಿ ಕೆಲವು ದಿನಗಳ ಹಿಂದೆ ಘೋಷಿಸಿದ್ದರು. ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಭಾರತಕ್ಕೆ ಸಾಧ್ಯವೇ ಎಂದು ಕೇಳಿದಾಗ, “ನೂರಕ್ಕೆ ನೂರರಷ್ಟು ಸಾಧ್ಯವಿದೆ. ಇದು ಕಷ್ಟ. ಆದರೆ ಅಸಾಧ್ಯವಲ್ಲʼʼ ಎಂದು ಉತ್ತರಿಸಿದ್ದರು.

ʼʼಭಾರತವು ಇಂಧನ ಆಮದಿಗಾಗಿ 16 ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡುತ್ತದೆ ಮತ್ತು ಈ ಹಣವನ್ನು ರೈತರ ಜೀವನವನ್ನು ಸುಧಾರಿಸಲು ಬಳಸಬಹುದು. ಇದರಿಂದ ಗ್ರಾಮಗಳು ಸಮೃದ್ಧವಾಗುತ್ತವೆ ಮತ್ತು ಯುವಜನತೆಗೆ ಉದ್ಯೋಗ ಸಿಗುತ್ತದೆʼʼ ಎಂದು ಅವರು ತಿಳಿಸಿದ್ದರು. ವಿಶೇಷ ಎಂದರೆ ನಿತಿನ್ ಗಡ್ಕರಿ ಅವರು 2004 ರಿಂದ ಪರ್ಯಾಯ ಇಂಧನಗಳಿಗಾಗಿ ಒತ್ತಾಯಿಸುತ್ತಲೇ ಬಂದಿದ್ದಾರೆ. ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಗಮನಿಸಿದರೆ, ಮುಂಬರುವ ಯುಗವು ಪರ್ಯಾಯ ಮತ್ತು ಜೈವಿಕ ಇಂಧನದ ಯುಗವಾಗಲಿದೆ ಮತ್ತು ಈ ಕನಸು ನನಸಾಗಲಿದೆ ಎಂಬ ಭರವಸೆಯನ್ನು ಅವರು ಹೊಂದಿದ್ದಾರೆ.