Thursday, 12th December 2024

Sunita Williams: ಸುನೀತಾ ವಿಲಿಯಮ್ಸ್‌ ಇರುವ ಗಗನನೌಕೆಯಲ್ಲಿ ನಿಗೂಢ ಸದ್ದು!

sunita williams

ನ್ಯೂಯಾರ್ಕ್:‌ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಹಾಗೂ ಇನ್ನೊಬ್ಬ ಗಗನಯಾತ್ರಿ ಬುಚ್‌ ವಿಲ್ಮೋರ್‌ ಅವರು ಬಾಹ್ಯಾಕಾಶದಲ್ಲಿ ಸಿಕ್ಕಿಬಿದ್ದಿರುವ ವ್ಯೋಮನೌಕೆಯಲ್ಲಿ ವಿಚಿತ್ರ ಸದ್ದೊದನ್ನು ಆಲಿಸಿರುವುದಾಗಿ ವರದಿ ಮಾಡಿದ್ದಾರೆ.

ʼಸೋನಾರ್ʼ ಮಾದರಿಯ ಸದ್ದು ಅದಾಗಿರುವುದಾಗಿ ಬುಚ್‌ ತಿಳಿಸಿದ್ದಾರೆ. ಸೋನಾರ್‌ ಎಂಬುದು ಶಬ್ದದ ಅಲೆಗಳನ್ನು ಅಳೆಯುವ ಒಂದು ತಂತ್ರಜ್ಞಾನ. ಸುನೀತಾ ಹಾಗೂ ಬುಚ್‌ ಬಾಹ್ಯಾಕಾಶಕ್ಕೆ ತೆರಳಿರುವ ಬೋಯಿಂಗ್‌ ಸ್ಟಾರ್‌ಲೈನರ್‌ ವ್ಯೋಮನೌಕೆಯಲ್ಲಿ ಈ ಸದ್ದು ಕೇಳಿಸಿದೆ. ಸೆಪ್ಟೆಂಬರ್‌ 6ರಂದು ಈ ನೌಕೆಯನ್ನು ಮರಳಿ ಭೂಮಿಗೆ ಕರೆಸಿಕೊಳ್ಳಲು ಉದ್ದೇಶಿಸಲಾಗಿದೆ. ಆದರೆ ಈ ನೌಕೆಯಲ್ಲಿ ಸುನೀತಾ ಹಾಗೂ ಬುಚ್‌ ಇರುವುದಿಲ್ಲ. ಈ ನೌಕೆ ದೋಷಪೂರಿತವಾಗಿದೆ ಎಂಬ ಕಾರಣದಿಂದ ಇದರಲ್ಲಿ ಗಗನಯಾತ್ರಿಗಳು ಹಿಂದಿರುಗುವುದನ್ನು ರದ್ದುಗೊಳಿಸಲಾಗಿದೆ.

ಸುನೀತಾ ಹಾಗೂ ಬುಚ್‌, ನಾಸಾದ ಕೇಂದ್ರವನ್ನು ಸಂಪರ್ಕಿಸಿದ್ದು, ಈ ನಿಗೂಢ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಸದ್ದು ಮರುಕಳಿಸುತ್ತಿದೆ ಹಾಗೂ ಕಂಪನಗಳಿಂದ ಕೂಡಿದೆ ಎಂದು ತಿಳಿಸಲಾಗಿದೆ. ಭೂಮಿಯಲ್ಲಿರುವ ನಾಸಾ ಸಿಬ್ಬಂದಿಗೂ ಈ ಸದ್ದನ್ನು ಕೇಳಿಸಲಾಗಿದೆ. ಆದರೆ ಇದರ ಮೂಲ ಯಾವುದು ಎಂಬುದು ಪತ್ತೆಯಾಗಿಲ್ಲ.

ಈ ಬೆಳವಣಿಗೆ ಈ ಬಿಕ್ಕಟ್ಟನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಿದೆ. ಮೊದಲು ಕೇವಲ 8 ದಿನಗಳ ಯಾತ್ರೆಗಾಗಿ ಸುನೀತಾ ಹಾಗೂ ಬುಚ್‌ ಅವರನ್ನು ಕರೆದುಕೊಂಡು ಸ್ಟಾರ್‌ಲೈನರ್‌ ಹೊರಟಿತ್ತು. ಆದರೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರ ತಲುಪಿದ ಬಳಿಕ ಸ್ಟಾರ್‌ಲೈನರ್‌ ನೌಕೆ ಹದಗೆಟ್ಟಿರುವುದು ಪತ್ತೆಯಾಗಿತ್ತು. ನೌಕೆಯಲ್ಲಿ ಥ್ರಸ್ಟರ್‌ ವೈಫಲ್ಯ ಹಾಗೂ ಹೀಲಿಯಂ ಸೋರಿಕೆ ಕಂಡುಬಂದಿತ್ತು. ಹೀಗಾಗಿ ಮೂರು ತಿಂಗಳಿಗೂ ಹೆಚ್ಚು ಕಾಲದಿಂದ ಇವರಿಬ್ಬರೂ ಬಾಹ್ಯಾಕಾಶ ಕೇಂದ್ರದಲ್ಲಿ ಉಳಿಯಬೇಕಾಗಿ ಬಂದಿದೆ. 2025ರ ಫೆಬ್ರವರಿಯಲ್ಲಿ ಇವರನ್ನು ಮರಳಿ ಭೂಮಿಗೆ ಕರೆಸಿಕೊಳ್ಳಬಹುದು ಎಂದು ಅಂದಾಜಿಸಲಾಗಿದೆ. ಸುರಕ್ಷತೆಯ ದೃಷ್ಟಿಯಿಂದಾಗಿ, ದೋಷಪೂರಿತ ನೌಕೆಯಲ್ಲಿ ಗಗನಯಾತ್ರಿಗಳನ್ನು ಕರೆತರಲು ನಾಸಾ ಸಿದ್ಧವಿಲ್ಲ.

ಸ್ಟಾರ್‌ಲೈನರ್‌ನಲ್ಲಿ ಕಂಡುಬಂದಿರುವ ಈ ಸದ್ದು, ವೈಜ್ಞಾನಿಕ ವಲಯದಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿರುವಂತೆಯೇ, ನೆಟ್ಟಿಗರಲ್ಲಿ ವಿನೋದದ ಚರ್ಚೆಯ ಸಂಗತಿಯಾಗಿಯೂ ಮಾರ್ಪಟ್ಟಿದೆ. ಅನ್ರಗೃಹ ಜೀವಿಗಳಿಂದ ಹಿಡಿದು ಸೈನ್ಸ್‌ ಫಿಕ್ಷನ್‌ನ ಅನೇಕ ಇತರ ಸಂಗತಿಗಳನ್ನೆಲ್ಲ ತರ್ಕಿಸಲಾಗುತ್ತಿದೆ. ಆದರೆ ತಜ್ಞರು ನೌಕೆಯ ದೋಷ, ಆಡಿಯೋ ವ್ಯವಸ್ಥೆಯ ದೋಷ ಇತ್ಯಾದಿ ಸಾಧ್ಯತೆಗಳನ್ನು ತರ್ಕಿಸಿದ್ದಾರೆ.