Friday, 22nd November 2024

ತಂದೆ ಚುನಾವಣೆಯಲ್ಲಿ ಗೆಲ್ಲುವ ತನಕ ಮದುವೆಯಾಗುವುದಿಲ್ಲ: ಸಿಧು ಪುತ್ರಿ

ನವದೆಹಲಿ: ಸಿಧು ಕಳೆದ 14 ವರ್ಷಗಳಿಂದ ಪಂಜಾಬ್​​ಗೆ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯಕ್ಕೆ ಮಾದರಿ ರಾಜಕಾರಣಿಯಾಗಿದ್ದಾರೆ. ನನ್ನ ತಂದೆಗೂ ಹಾಗೂ ಪಂಜಾಬ್​ನಲ್ಲಿರುವ ಇತರೆ ಯಾವುದೇ ರಾಜಕಾರಣಿಗಳಿಗೂ ಹೋಲಿಕೆಯೇ ಇಲ್ಲ. ತಮ್ಮ ತಂದೆ ಚುನಾವಣೆಯಲ್ಲಿ ಗೆಲ್ಲುವ ತನಕ ತಾವು ಮದುವೆಯಾಗುವುದಿಲ್ಲ ಎಂದು ನವಜೋತ್​ ಸಿಂಗ್​ ಸಿಧು ಪುತ್ರಿ ರಬಿಯಾ ಸಿಧು ಪಣತೊಟ್ಟಿದ್ದಾರೆ.

ಪಂಜಾಬ್​ ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್​ ನಾಯಕ ನವಜೋತ್​ ಸಿಂಗ್​ ಸಿಧು ಪುತ್ರಿ ರಬಿಯಾ ಸಿಧು ಅಮೃತಸರ(ಪೂರ್ವ) ಕ್ಷೇತ್ರದಲ್ಲಿ ತಮ್ಮ ತಂದೆಯ ಪರ ಪ್ರಚಾರ ನಡೆಸಿ ದರು.

ಪ್ರಚಾರದ ವೇಳೆಯಲ್ಲಿ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿದ ರಾಬಿಯಾ, ಕಾಂಗ್ರೆಸ್​ ಸಿಎಂ ಅಭ್ಯರ್ಥಿ ಹಾಗೂ ಹಾಲಿ ಸಿಎಂ ಚರಂಜೀತ್​ ಸಿಂಗ್​ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಿ ತಾವು ಹೇಳಿಕೊಂಡಂತೆ ನಿಜವಾಗಿಯೂ ಬಡವರಾ ಎಂಬ ಸಂದೇಹ ವ್ಯಕ್ತಪಡಿಸಿದ ರಾಬಿಯಾ ಅವರ ಬ್ಯಾಂಕ್​ ಖಾತೆಗಳನ್ನು ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.

ಮೊದಲು ಅವರ ಬ್ಯಾಂಕ್​ ಖಾತೆಯನ್ನು ಪರಿಶೀಲನೆ ಮಾಡಿ. ನಿಮಗೆ 133 ಕೋಟಿಗೂ ಅಧಿಕ ಹಣ ಇರಬಹುದು ಎಂದು ಸಂದೇಹ ವ್ಯಕ್ತಪಡಿಸಿದರು. ಪಂಜಾಬ್​ ವಿಧಾನಸಭಾ ಚುನಾವಣೆಯಲ್ಲಿ ಚನ್ನಿಯನ್ನು ಸಿಎಂ ಅಭ್ಯರ್ಥಿಯೆಂದು ಘೋಷಿಸಿ ತಮ್ಮ ತಂದೆ ನವಜೋತ್​ ಸಿಂಗ್​ ಸಿಧುವನ್ನು ಕಡೆಗಣಿಸಿದ್ದಕ್ಕಾಗಿ ಕಾಂಗ್ರೆಸ್​ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಬಹುಶಃ ಹೈಕಮಾಂಡ್​ಗೆ ಯಾರೋ ಒತ್ತಡ ಹೇರಿರಬಹುದು. ಆದರೆ ನೀವು ಪ್ರಾಮಾಣಿಕ ವ್ಯಕ್ತಿಯನ್ನು ದೀರ್ಘಕಾಲದವರೆಗೆ ಹಿಡಿದಿಡಲು ಸಾಧ್ಯವಿಲ್ಲ. ಅಪ್ರಮಾಣಿಕ ವ್ಯಕ್ತಿಯು ಕ್ರಮೇಣವಾಗಿ ದೂರ ಸರಿಯಲೇಬೇಕು ಎಂದು ಹೇಳಿದರು.