Wednesday, 4th December 2024

Sukhbir Singh Badal: ಸುಖಬೀರ್‌ ಬಾದಲ್‌ ಹತ್ಯೆ ಯತ್ನದ ಹಿಂದೆ ಖಲಿಸ್ತಾನಿಗಳ ಕೈವಾಡ! ಬಂಧಿತ ನರೇನ್‌ ಸಿಂಗ್‌ ಚೌರ ಯಾರು?

sukhbir singh

ಅಮೃತಸರ: ಸಿಖ್‌ ಧಾರ್ಮಿಕ ಸಂಸ್ಥೆ ಅಕಾಲ್‌ ತಖ್ತ್‌ನಿಂದ ಧರ್ಮದ್ರೋಹಕ್ಕಾಗಿ ಶಿಕ್ಷಿತರಾಗಿರುವ ಪಂಜಾಬ್‌ನ ಮಾಜಿ ಡಿಸಿಎಂ ಸುಖಬೀರ್‌ ಸಿಂಗ್‌ ಬಾದಲ್‌(Sukhbir Singh Badal) ಮೇಲೆ ಬುಧವಾರ ಬೆಳಗ್ಗೆ ಅಮೃತಸರದ ಗೋಲ್ಡನ್ ಟೆಂಪಲ್ ಪ್ರವೇಶದ್ವಾರದ ಬಳಿ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ. ಇದೀಗ ಈ ದುಷ್ಕೃತ್ಯದ ಹಿಂದೆ ಖಲಿಸ್ತಾನಿ ಪ್ರತ್ಯೇಕತಾವಾದಿಗಳ ಕೈವಾಡ ಇರುವುದು ಸಾಬೀತಾಗಿದ್ದು, ಖಲಿಸ್ತಾನಿ ನಾಯಕ ನರೇನ್ ಸಿಂಗ್ ಚೌರಾ(Narain Singh Chaura)ನನ್ನು ಅರೆಸ್ಟ್‌ ಮಾಡಲಾಗಿದೆ.

ಸಿಂಗ್‌ ಬಾದಲ್‌ ಅವರಿಗೆ ಸೋಮವಾರ ಶಿಕ್ಷೆ ಘೋಷಣೆಯಾಗಿತ್ತು. 2007-17ರವರೆಗೆ ಪಂಜಾಬ್‌ನ ಎಸ್‌ಎಡಿ ಸರ್ಕಾರವು ಸಿಖ್‌ ಧರ್ಮಗ್ರಂಥಕ್ಕೆ ಅವಮಾನಿಸಿದೆ ಮತ್ತು ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಬೆಂಬಲಿಸುವ ಮೂಲಕ ಧರ್ಮನಿಂದನೆ ನಡೆಸಿದೆ ಎಂದು ಅಕಾಲ್‌ ತಖ್ತ್‌ ಆಗಸ್ಟ್‌ನಲ್ಲಿ ತೀರ್ಪು ಪ್ರಕಟಿಸಿತ್ತು.

ಕುತ್ತಿಗೆಗೆ ಫ‌ಲಕ, ಕೈಯಲ್ಲಿ ಈಟಿ ಹಿಡಿದ ಸುಖ್ಬೀರ್‌ ಸಿಂಗ್‌, ತಮ್ಮ ಗಾಲಿ ಕುರ್ಚಿಯಲ್ಲಿ ಕುಳಿತೇ ಅಮೃತಸರದ ಸ್ವರ್ಣ ಮಂದಿರದ ಪ್ರವೇಶದ್ವಾರದ ಸೇವಾದಾರನ ವೃತ್ತಿ ನಿಭಾಯಿಸಿದ್ದರು. ಮತ್ತೋರ್ವ ಅಕಾಲಿ ದಳ ನಾಯಕ ಬಿಕ್ರಮ್‌ ಸಿಂಗ್‌ ಮಜೀಠಿಯಾ ಕೂಡ ಗುರುದ್ವಾರದ ಪಾತ್ರೆಗಳನ್ನು ತೊಳೆಯುವ ಮೂಲಕ ಶಿಕ್ಷೆಯನ್ನು ಪ್ರಾರಂಭಿಸಿದ್ದರು. ಇದೀಗ ಮರು ದಿನವೇ ಬಾದಲ್‌ ಹತ್ಯೆಗೆ ಯತ್ನಿಸಲಾಗಿದೆ.

ಯಾರು ಈ ನರೇನ್‌ ಸಿಂಗ್‌?

ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿಯಲ್ಲಿ ಅನೇಕ ಪ್ರಕರಣಗಳನ್ನು ಎದುರಿಸುತ್ತಿರುವ ಚೌರಾ, ಭಯೋತ್ಪಾದನೆ ಸಂಬಂಧಿತ ಚಟುವಟಿಕೆಗಳಿಗಾಗಿ ಹಲವು ಬಾರಿ ಜೈಲು ಪಾಲಾದ ಕುಖ್ಯಾತ ವ್ಯಕ್ತಿ. ಪೋಲೀಸರ ಪ್ರಕಾರ, ಚೌರಾ 1984ರಿಂದ ಪಾಕಿಸ್ತಾನದ ಜತೆ ನಿರಂತರ ನಂಟು ಹೊಂದಿದ್ದ ಮತ್ತು ಆರಂಭಿಕ ಹಂತದಲ್ಲಿ ಪಂಜಾಬ್‌ಗೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಕಳ್ಳಸಾಗಣೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಪಾಕಿಸ್ತಾನದಲ್ಲಿದ್ದಾಗ, ಆತ ಗೆರಿಲ್ಲಾ ಯುದ್ಧ ಮತ್ತು “ದೇಶದ್ರೋಹಿ” ಸಾಹಿತ್ಯದ ಕುರಿತು ಪುಸ್ತಕವನ್ನು ಬರೆದಿದ್ದ ಎನ್ನಲಾಗಿದೆ. 1990 ರ ದಶಕದ ಮಧ್ಯಭಾಗದಲ್ಲಿ ನರೇನ್‌ ಭಾರತಕ್ಕೆ ಮರಳಿ ಅನೇಕ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ.

2003-2004ರ ಅವಧಿಯಲ್ಲಿ ಚಂಡೀಗಢದ ಬುರೈಲ್ ಜೈಲಿನಲ್ಲಿರುವ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹಂತಕರಿಗೆ ಮೊಬೈಲ್ ಫೋನ್‌ಗಳು ಮತ್ತು ಇತರ ನಿಷೇಧಿತ ವಸ್ತುಗಳನ್ನು ಒದಗಿಸಿದ್ದಕ್ಕಾಗಿ ಬುರೈಲ್ ಜೈಲ್ ಬ್ರೇಕ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಯಿತು.

ಈ ಸುದ್ದಿಯನ್ನೂ ಓದಿ: Sukhbir Badal : ಪಂಜಾಬ್ ಮಾಜಿ ಡಿಸಿಎಂಗೆ ಶೌಚಾಲಯ ಸ್ವಚ್ಛಗೊಳಿಸುವ, ಚಪ್ಪಲಿ ಪಾಲಿಶ್‌ ಮಾಡುವ ಶಿಕ್ಷೆ! ಕಾರಣ ಏನು ಗೊತ್ತೆ?