ಹೈದ್ರಾಬಾದ್: ಗೃಹ ಸಚಿವ ಅಮಿತ್ ಶಾ ಅವರ ವಿಡಿಯೋ ತಿರುಚಿದ ಆರೋಪದ ಮೇಲೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ತೆಲಂಗಾಣ ಮೂಲದ ಇತರ ನಾಲ್ವರಿಗೂ ಪ್ರಕರಣದ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.
ತೆಲಂಗಾಣ ಕಾಂಗ್ರೆಸ್‌ನ ಅಧಿಕೃತ X ಖಾತೆಯಿಂದ ವಿಡಿಯೋ ತಿರುಚಲಾಗಿರುವ ವಿಡಿಯೋ ಎಂದು ಆರೋಪಿಸಲಾಗಿದೆ. ಅನೇಕ ಪಕ್ಷದ ನಾಯಕರು ಈ ವಿಡಿಯೋವನ್ನು ಮರು ಪೋಸ್ಟ್ ಮಾಡಿದ್ದಾರೆ.
ತಿರುಚಿದ ವಿಡಿಯೋದಲ್ಲಿ ಗೃಹ ಸಚಿವ ಅಮಿತ್ ಶಾ ಅವರ ಪರಿಶಿಷ್ಟ ಜಾತಿಗಳು (ಎಸ್‌ಸಿಗಳು), ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿ ಕೋಟಾಗಳನ್ನು ರದ್ದುಗೊಳಿಸುವುದಾಗಿ ಹೇಳಿರುವುದು ಕಂಡು ಬಂದಿದೆ. ಆದರೆ ಅಸಲಿ ವಿಡಿಯೋದಲ್ಲಿ ಅಮಿತ್ ಶಾ ಆ ರೀತಿ ಹೇಳಿಕೆ ನೀಡಿಲ್ಲ ಎಂದು ತಿಳಿದು ಬಂದಿದೆ.
ಎಡಿಟ್ ಮಾಡಿದ ವಿಡಿಯೋ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಬಿಜೆಪಿ ಮತ್ತು ಗೃಹ ಸಚಿವಾಲಯದ ದೂರಿನ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತೆಲಂಗಾಣ ಸಿಎಂ ಸೇರಿದಂತೆ ನಾಲ್ವರಿಗೆ ಸಮನ್ಸ್ ಜಾರಿ ಮಾಡಿದ್ದಾರೆ.
ಹಿಂಸಾಚಾರಕ್ಕೆ ಕಾರಣವಾಗುವ ನಕಲಿ ವಿಡಿಯೋವನ್ನು ತೆಲಂಗಾಣ ಕಾಂಗ್ರೆಸ್ ಹಂಚಿಕೊಂಡಿದೆ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವಿಯಾ ಟೀಕಿಸಿದ್ದಾರೆ.