ಮುಂಬೈ: ಕಮಲ್ ನಯನ್ ಬಜಾಜ್ ಹಾಲ್ ಮತ್ತು ಆರ್ಟ್ ಗ್ಯಾಲರಿ (Kamalnayan Bajaj Hall and Art Gallery)ಯ ನಿರ್ದೇಶಕಿ ಸುನಯನಾ ಕೇಜ್ರಿವಾಲ್ (Sunaina Kejriwal) ಅವರು ಶನಿವಾರ (ಅಕ್ಟೋಬರ್ 5) ಮುಂಬೈಯಲ್ಲಿ ನಿಧನ ಹೊಂದಿದರು. 3 ವರ್ಷಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರಿಗೆ 53 ವರ್ಷ ವಯಸ್ಸಾಗಿತ್ತು.
ಸುನಯನಾ ಕೇಜ್ರಿವಾಲ್ ಅವರು ಬಜಾಜ್ ಆಟೋದ ಮಾಜಿ ಅಧ್ಯಕ್ಷ ದಿವಂಗತ ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಅವರ ಪುತ್ರಿ. ಅವರು ಕೇದಾರ ಕ್ಯಾಪಿಟಲ್‌ನ ಸ್ಥಾಪಕ ಮತ್ತು ವ್ಯವಸ್ಥಾಪಕ ಪಾಲುದಾರರಾಗಿರುವ ಪತಿ ಮನೀಶ್ ಕೇಜ್ರಿವಾಲ್ ಮತ್ತು ಇಬ್ಬರು ಪುತ್ರರಾದ ಆರ್ಯಮನ್ ಮತ್ತು ನಿರ್ವಾನ್ ಅವರನ್ನು ಅಗಲಿದ್ದಾರೆ.
ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ಎಕ್ಸ್ (ಹಿಂದಿನ ಟ್ವಿಟರ್) ಮೂಲಕ ಸಂತಾಪ ಸೂಚಿಸಿದ್ದಾರೆ. ಕಿರಣ್ ಮಜುಂದಾರ್ ಶಾ ತಮ್ಮ ಪೋಸ್ಟ್‌ನಲ್ಲಿ ʼʼಸುನಯನಾ ಅದ್ಭುತ ವ್ಯಕ್ತಿಯಾಗಿದ್ದು, ಅವರ ಜೀವನವನ್ನು ಕ್ಯಾನ್ಸರ್ ಕಸಿದುಕೊಂಡಿದೆʼʼ ಎಂದು ಬರೆದುಕೊಂಡಿದ್ದಾರೆ.
Sunaina Kejriwal, Director Of Kamalnayan Bajaj Hall In Mumbai, Dies At 53 – A wonderful person whose life was snatched away by cancer. My deepest condolences to the Bajaj and Kejriwal families Om Shanthi 🙏 https://t.co/6BlZwiucyl
— Kiran Mazumdar-Shaw (@kiranshaw) October 7, 2024
ಕೌಟುಂಬಿಕ ಹಿನ್ನೆಲೆ
ಸುನಯನಾ ಅವರಿಗೆ ರಾಜೀವ್ ಮತ್ತು ಸಂಜೀವ್ ಬಜಾಜ್ ಎಂಬ ಇಬ್ಬರು ಸಹೋದರರಿದ್ದಾರೆ. ಸುನಯನಾ ಅವರ ಹಿರಿಯ ಪುತ್ರ ಆರ್ಯಮನ್ ಪ್ರಸ್ತುತ ಅಮೆರಿಕದ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡುತ್ತಿದ್ದರೆ, ನಿರ್ವಾನ್ ಬಾಂಬೆ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.
ಬಹುಮುಖ ಪ್ರತಿಭೆ
ಕುಂಬಾರಿಕೆ, ರಂಗಭೂಮಿ ಮತ್ತು ಪ್ರವಾಸದ ಬಗ್ಗೆ ಸುನಯನಾ ಅಪಾಯ ಆಸಕ್ತಿ ಹೊಂದಿದ್ದರು. ಅವರು ಪುಣೆಯ ಎಸ್ಎನ್‌ಡಿಟಿ (SNDT) ಕಾಲೇಜಿನಿಂದ ಜವಳಿ ಕ್ಷೇತ್ರದಲ್ಲಿ ಪರಿಣತಿ ಪಡೆದರು ಮತ್ತು ಮುಂಬೈಯ ಸೋಫಿಯಾ ಕಾಲೇಜಿನಲ್ಲಿ ಒಂದು ವರ್ಷದ ಸಿಲ್ಕ್ ಸ್ಕ್ರೀನ್ ಪ್ರಿಂಟಿಂಗ್ ಶಿಕ್ಷಣ ಪೂರೈಸಿದ್ದರು. ಅವರು ಮುಂಬೈಯ ಭಾವು ದಾಜಿ ಲಾಡ್ ಮ್ಯೂಸಿಯಂನಿಂದ ‘ದಿ ಹಿಸ್ಟರಿ ಆಫ್ ಇಂಡಿಯನ್ ಆರ್ಟ್ – ಮಾಡರ್ನ್ & ಕಂಟೆಂಪರರಿ & ಕ್ಯುರೇಟರಿಯಲ್ ಸ್ಟಡೀಸ್’ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪಡೆದಿದ್ದರು.
ಬಜಾಜ್ ಕುಟುಂಬವು ಮಹಾತ್ಮ ಗಾಂಧಿ ಅವರ ಸ್ವಾತಂತ್ರ್ಯ ಹೋರಾಟಕ್ಕೆ ಕೈಜೋಡಿಸಿತ್ತು. ಇದೀಗ ಜಮ್ನಾಲಾಲ್ ಬಜಾಜ್ ಫೌಂಡೇಶನ್ ಮೂಲಕ ಸಮಾಜ ಸೇವೆ ಮುಂದುವರಿಸಿದೆ. ಬಜಾಜ್ ಕುಟುಂಬದ ಭಾವು ದಾಜಿ ಲಾಡ್ ವಸ್ತುಸಂಗ್ರಹಾಲಯವು ಹಲವು ಪಾರಂಪರಿಕ ತಾಣಗಳನ್ನು ಪುನಃಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಈ ಸುದ್ದಿಯನ್ನೂ ಓದಿ: Ratan Tata: ಹಿರಿಯ ಉದ್ಯಮಿ ರತನ್ ಟಾಟಾ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು