Monday, 23rd September 2024

Sundar Pichai: ದೂರದೃಷ್ಟಿಯ ನಾಯಕ ನರೇಂದ್ರ ಮೋದಿ: ಗೂಗಲ್‌ ಸಿಇಒ ಸುಂದರ್‌ ಪಿಚೈ ಶ್ಲಾಘನೆ

sundar pichai narendra modi

ನ್ಯೂಯಾರ್ಕ್‌: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಟೆಕ್ನಾಲಜಿ ವಿಷಯದಲ್ಲಿ ವಿಸ್ತಾರವಾದ ದರ್ಶನವನ್ನು ಹೊಂದಿದ್ದಾರೆ. ಭಾರತ ಟೆಕ್ನಾಲಜಿಯಲ್ಲಿ ತನ್ನ ಕಾಲಕ್ಕಿಂತಲೂ ಮುಂದಿದ್ದಾರೆ ಎಂದು ಗೂಗಲ್‌ನ ಸಿಇಒ ಸುಂದರ್‌ ಪಿಚೈ (Google CEO Sundar Pichai) ಶ್ಲಾಘಿಸಿದ್ದಾರೆ. ಮೇಕ್‌ ಇನ್‌ ಇಂಡಿಯಾದಲ್ಲಿ (Make in India) ಹೂಡಿಕೆ ಮಾಡಲು, ಭಾರತದಲ್ಲಿ ಗೂಗಲ್‌ ಉತ್ಪಾದನೆಗೆ ನಮ್ಮನ್ನು ಮೋದಿ ಪ್ರೇರೇಪಿಸಿದ್ದಾರೆ. ನಮ್ಮ ಪಿಕ್ಸೆಲ್‌ ಪೋನ್‌ಗಳು (Pixel Phone) ಭಾರತದಲ್ಲಿ ತಯಾರಾಗಲಿವೆ ಎಂದು ಡಿಜಿಟಲ್‌ ಭಾರತ (Digital India) ಹಾಗೂ ದೇಶದಲ್ಲಿ ಎಐ (AI) ಉತ್ತೇಜನ ಇತ್ಯಾದಿಗಳ ಹಿನ್ನೆಲೆಯಲ್ಲಿ ಅವರು ಮೋದಿಯವರನ್ನು ಶ್ಲಾಘಿಸಿದ್ದಾರೆ.

ಟೆಕ್ ಉದ್ಯಮದ ಪ್ರಮುಖರೊಂದಿಗೆ ನಿನ್ನೆ ಉನ್ನತ ಮಟ್ಟದ ದುಂಡುಮೇಜಿನ ಸಭೆಯನ್ನು ಪ್ರಧಾನಿ ನರೇಂದ್ರ ಮೋದಿ ನಡೆಸಿದರು. ಈ ವೇಳೆ ಗೂಗಲ್ ಸಿಇಒ ಸುಂದರ್ ಪಿಚೈ ಉಪಸ್ಥಿತರಿದ್ದರು. ನಂತರ ಪಿಚೈ, ಭಾರತದ ಡಿಜಿಟಲ್ ರೂಪಾಂತರಕ್ಕೆ ಚಾಲನೆ ನೀಡಿದ ಮೋದಿಯವರ ಬದ್ಧತೆಯನ್ನು ಶ್ಲಾಘಿಸಿದರು. ಜಾಗತಿಕ ತಂತ್ರಜ್ಞಾನದ ರಂಗದಲ್ಲಿ ಭಾರತದ ಬೆಳೆಯುತ್ತಿರುವ ಪಾತ್ರವನ್ನು ಎತ್ತಿ ತೋರಿಸಿದ ಪಿಚೈ, ವಿಶೇಷವಾಗಿ ಕೃತಕ ಬುದ್ಧಿಮತ್ತೆ (AI) ಮತ್ತು ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಹೇಗೆ ಮೋದಿಯವರು ವಿಶೇಷ ಆಸ್ಥೆ ವಹಿಸಿದ್ದಾರೆ ಎಂಬ ಕುರಿತು ಒಳನೋಟಗಳನ್ನು ಹಂಚಿಕೊಂಡರು.

“ಪ್ರಧಾನಿ ಮೋದಿಯವರು ಭಾರತವನ್ನು ಪರಿವರ್ತಿಸುವತ್ತ ಗಮನಹರಿಸಿದ್ದಾರೆ. ಅವರದು ಡಿಜಿಟಲ್ ಇಂಡಿಯಾ ದೃಷ್ಟಿ. ಅವರು ಮೇಕ್‌ ಇನ್‌ ಇಂಡಿಯಾ ಮುಂದುವರಿಸಲು, ಭಾರತದಲ್ಲಿ ನಮ್ಮ ಡಿಸೈನ್‌ ಮುಂದುವರಿಸಲು ನಮ್ಮನ್ನು ಒತ್ತಾಯಿಸಿದ್ದಾರೆ. ನಮ್ಮ ಪಿಕ್ಸೆಲ್ ಫೋನ್‌ಗಳನ್ನು ಭಾರತದಲ್ಲಿ ಉತ್ಪಾದಿಸಲು ನಾವು ಹೆಮ್ಮೆಪಡುತ್ತೇವೆ” ಎಂದು ಪಿಚೈ ನುಡಿದಿದ್ದಾರೆ.

AI ಮತ್ತು ಭಾರತೀಯ ನಾಗರಿಕರ ಜೀವನವನ್ನು ಸುಧಾರಿಸುವಲ್ಲಿ ಅದರ ಸಾಧ್ಯತೆಯನ್ನು ಮೋದಿ ಒತ್ತಿಹೇಳಿದ್ದಾರೆ. “ಭಾರತದ ಜನತೆಗೆ ಪ್ರಯೋಜನವಾಗುವ ರೀತಿಯಲ್ಲಿ AI ಭಾರತವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದರ ಕುರಿತು ಅವರು ಆಳವಾಗಿ ಯೋಚಿಸುತ್ತಿದ್ದಾರೆ” ಎಂದು ಪಿಚೈ ಹೇಳಿದರು. ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತಹ ಕ್ಷೇತ್ರಗಳಲ್ಲಿ AI ಅನ್ವಯಿಸುವಿಕೆಯವನ್ನು ಪರಿಗಣಿಸಲು ಟೆಕ್‌ ಲೀಡರ್‌ಗಳಿಗೆ ಮೋದಿ ಕರೆ ನೀಡಿದರು.

ದೇಶದ ತಾಂತ್ರಿಕ ಮೂಲಸೌಕರ್ಯಕ್ಕಾಗಿ ಮೋದಿಯವರ ದೂರದೃಷ್ಟಿಯನ್ನು ಪಿಚೈ ವಿವರಿಸಿದ್ದಾರೆ. “ಅವರು ಭಾರತದ ಮೂಲಸೌಕರ್ಯಗಳ ಬಗ್ಗೆಯೂ ಯೋಚಿಸುತ್ತಿದ್ದಾರೆ. ಭಾರತದ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಡೇಟಾ ಕೇಂದ್ರಗಳು, ಇಂಧನ ಮತ್ತು ಹೂಡಿಕೆಗಳು ಅಗತ್ಯವಿವೆ ಎಂದು ಅರಿತಿದ್ದಾರೆ” ಎಂದರು ಪಿಚೈ

ವಿಶೇಷವಾಗಿ ಎಐಯಲ್ಲಿ ಭಾರತದೊಂದಿಗಿನ ಸಹಯೋಗದ ಬಗ್ಗೆ ಪಿಚೈ ಹೆಮ್ಮೆ ವ್ಯಕ್ತಪಡಿಸಿದರು. “ನಾವು ಭಾರತದಲ್ಲಿ AIನಲ್ಲಿ ದೃಢವಾಗಿ ಹೂಡಿಕೆ ಮಾಡುತ್ತಿದ್ದೇವೆ. ಇನ್ನಷ್ಟು ಹೂಡಿಕೆಗೆ ನಾವು ಎದುರು ನೋಡುತ್ತಿದ್ದೇವೆ. ಇದಕ್ಕಾಗಿ ನಾವು ಹಲವಾರು ಕಾರ್ಯಕ್ರಮಗಳು ಮತ್ತು ಪಾಲುದಾರಿಕೆಗಳನ್ನು ಹೊಂದಿದ್ದೇವೆ” ಎಂದು ಭಾರತದ ಡಿಜಿಟಲ್ ಬೆಳವಣಿಗೆಗೆ ಗೂಗಲ್‌ನ ನಿರಂತರ ಬೆಂಬಲವನ್ನು ಅವರು ಒತ್ತಿಹೇಳಿದರು.

ಸಭೆಯ ಸಂದರ್ಭದಲ್ಲಿ ಮೋದಿಯವರು, ಜಾಗತಿಕ ತಂತ್ರಜ್ಞಾನ ಕಂಪನಿಗಳನ್ನು ಭಾರತದೊಂದಿಗೆ ತಮ್ಮ ಪಾಲುದಾರಿಕೆಯನ್ನು ಹೆಚ್ಚಿಸಲು ಪ್ರೋತ್ಸಾಹಿಸಿದರು. “ಭಾರತಕ್ಕಾಗಿ ಮತ್ತಷ್ಟು ಕೆಲಸ ಮಾಡಲು ಅವರು ಯಾವತ್ತಿನಿಂದಲೂ ನಮ್ಮನ್ನು ಪ್ರೋತ್ಸಾಹಿಸುತ್ತಿದ್ದಾರೆ. ಈಗ ಅವರು AI ಕ್ಷೇತ್ರದಲ್ಲಿ ಅದೇ ರೀತಿ ಮಾಡಲು ನಮ್ಮನ್ನು ಆಹ್ವಾನಿಸುತ್ತಿದ್ದಾರೆ” ಎಂದು ಪಿಚೈ ಹೇಳಿದ್ದಾರೆ. ಭಾರತೀಯ ಜನತೆಗೆ ಅನುಕೂಲವಾಗುವಂತೆ AIಯನ್ನು ಬಳಸುವ ಮೋದಿಯವರ ದೂರದೃಷ್ಟಿಯನ್ನು ಶ್ಲಾಘಿಸಿದ ಅವರು, “ಅವೆಲ್ಲವೂ ಭಾರತದ ಜನರ ಸೇವೆಗೆ ಇರಬೇಕು ಎಂಬ ಸ್ಪಷ್ಟ ದೃಷ್ಟಿಕೋನವನ್ನು ಹೊಂದಿದ್ದಾರೆ” ಎಂದು ಹೇಳಿದರು.

ನ್ಯೂಯಾರ್ಕ್‌ನ ಮೆಸಾಚುಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಆಯೋಜಿಸಿದ್ದ ಸಭೆಯಲ್ಲಿ ಅಡೋಬ್ ಸಿಇಒ ಶಂತನು ನಾರಾಯಣ್, ಐಬಿಎಂ ಸಿಇಒ ಅರವಿಂದ್ ಕೃಷ್ಣ ಮತ್ತು ಎಎಮ್‌ಡಿ ಸಿಇಒ ಲಿಸಾ ಸು ಸೇರಿದಂತೆ ಟೆಕ್ ಪ್ರಪಂಚದ ಪ್ರಮುಖ ವ್ಯಕ್ತಿಗಳು ಭಾಗವಹಿಸಿದರು. ಸೆಮಿಕಂಡಕ್ಟರ್‌ಗಳು, AI, ಕ್ವಾಂಟಮ್ ಕಂಪ್ಯೂಟಿಂಗ್ ಮತ್ತು ಜೈವಿಕ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ತಾಂತ್ರಿಕ ಆವಿಷ್ಕಾರದ ಕೇಂದ್ರವಾಗಿ, ವಿಸ್ತರಿಸುತ್ತಿರುವ ದೇಶದ ಡಿಜಿಟಲ್ ವಲಯದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸಲು ಅವರನ್ನು ಪಿಎಂ ಮೋದಿ ಪ್ರೋತ್ಸಾಹಿಸಿದರು.

ನ್ಯೂಯಾರ್ಕ್‌ನಲ್ಲಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಹೊಸ ರೀತಿಯ AI ಕುರಿತು ಮಾತನಾಡಿದರು. ಇದನ್ನು ಅವರು “ಅಮೇರಿಕನ್-ಇಂಡಿಯನ್ (ಎಐ) ಸ್ಪಿರಿಟ್” ಎಂದು ಕರೆದರು. “ಇದು ಉಭಯ ದೇಶಗಳ ನಡುವಿನ ಆಳವಾದ ಬಾಂಧವ್ಯವನ್ನು ಪ್ರತಿಬಿಂಬಿಸುತ್ತದೆ. ಜಗತ್ತಿಗೆ AI ಕೃತಕ ಬುದ್ಧಿಮತ್ತೆಯನ್ನು ಪ್ರತಿನಿಧಿಸಿದರೆ, ನನಗೆ ಇದು ಅಮೆರಿಕನ್- ಇಂಡಿಯನ್‌ ಆತ್ಮವನ್ನು ಪ್ರತಿನಿಧಿಸುತ್ತದೆ” ಎಂದು ಮೋದಿ ಹೇಳಿದರು. ಜಾಗತಿಕ ತಂತ್ರಜ್ಞಾನದಲ್ಲಿ ಭಾರತೀಯ ಪ್ರತಿಭೆಗಳ ಕೊಡುಗೆಗಳನ್ನು ಎತ್ತಿ ತೋರಿಸಿದರು.

ಇದನ್ನೂ ಓದಿ: PM Modi Tech CEOs Meet: ಟೆಕ್‌ ಕಂಪನಿಗಳ ಸಿಇಒಗಳ ಜತೆ‌ ಪ್ರಧಾನಿ ಮೋದಿ ಮಹತ್ವದ ಸಭೆ