ಮುಂಬೈ: ಬಾಲಿವುಡ್(Bollywood) ನ ಖ್ಯಾತ ಹಾಸ್ಯನಟ ಸುನಿಲ್ ಪಾಲ್(Sunil Pal) ನಾಪತ್ತೆಯಾಗಿದ್ದರು ಎಂದು ಮುಂಬೈನ ಸಂತಕ್ರುಜ್ ಪೊಲೀಸ್ (Santacruz Police Station) ಠಾಣೆಯಲ್ಲಿ ಮಿಸ್ಸಿಂಗ್(Missing) ಕೇಸ್ ದಾಖಲಾಗಿತ್ತು. 24 ಗಂಟೆ ಯಾರ ಸಂಪರ್ಕಕ್ಕೂ ಸಿಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಗಾಬರಿಗೊಂಡಿದ್ದರು. ಅವರ ಪತ್ನಿ ಸರಿತಾ ಪಾಲ್ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪೊಲೀಸ್ ಅಧಿಕಾರಿಗಳು ಸುನಿಲ್ ಪಾಲ್ ಅವರನ್ನು ಪತ್ತೆ ಹಚ್ಚುವಲ್ಲಿ ಯುಶಸ್ವಿಯಾಗಿದ್ದು,ಅವರನ್ನು ಸುರಕ್ಷಿತವಾಗಿ ಮಂಗಳವಾರ(ಡಿ.3) ರಾತ್ರಿ ಮನೆಗೆ ತಲುಪಿಸಿದ್ದಾರೆ ಎಂಬ ಮಾಹಿತಿಯಿದೆ.
ಸುನಿಲ್ ಪಾಲ್ ಅವರು ಒಂದು ಕಾರ್ಯಕ್ರಮದ ನಿಮಿತ್ತ ಮುಂಬೈನಿಂದ ಹೊರ ಹೋಗುವುದಾಗಿ ತಮ್ಮ ಪತ್ನಿಗೆ ತಿಳಿಸಿದ್ದರು. ಕಾರ್ಯಕ್ರಮ ಮುಗಿದ ಕೂಡಲೇ ಮನೆಗೆ ವಾಪಸ್ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ ಸುನಿಲ್ ಪಾಲ್ ತಡ ರಾತ್ರಿಯಾದರೂ ಮನೆಗೆ ಬಂದಿರಲಿಲ್ಲ. ಕಂಗಾಲಾದ ಅವರ ಪತ್ನಿ ಫೋನ್ ಮೂಲಕ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದ್ದಾರೆ. ಸಂಪರ್ಕಕ್ಕೆ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿ ಸಹಾಯ ಕೇಳಿದ್ದಾರೆ. ಪ್ರಕರಣದ ಗಂಭೀರತೆ ಅರಿತ ಪೊಲೀಸರು, ತಕ್ಷಣವೇ ತನಿಖೆ ಆರಂಭಿಸಿದ್ದಾರೆ. ಕೊನೆಗೂ ಪೊಲೀಸರು ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಮಾಹಿತಿಗಳ ಪ್ರಕಾರ ಸುನಿಲ್ ಪಾಲ್ ಕಿಡ್ನಾಪ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಯಾರು ಅವರನ್ನು ಕಿಡ್ನಾಪ್ ಮಾಡಿದ್ದರು ಅನ್ನುವುದರ ಬಗ್ಗೆ ಈವರೆಗೂ ಸ್ಪಷ್ಟ ಮಾಹಿತಿ ದೊರೆತಿಲ್ಲ.
ಸುನಿಲ್ ಪಾಲ್ ಬಾಲಿವುಡ್ ಚಿತ್ರರಂಗದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಹಾಸ್ಯ ನಟ ಮತ್ತು ಕಂಠದಾನ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸುನಿಲ್ ಪಾಲ್ ಕಳೆದ ಎರಡು ದಶಕಗಳಲ್ಲಿ ಸಾಕಷ್ಟು ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಯಶಸ್ವಿಯಾಗಿದ್ದಾರೆ. ಹಮ್ ತುಮ್, ಫಿರ್ ಹೇರಾ ಫೇರಿ,ಅಪ್ನಾ ಸಪ್ನಾ ಮನಿ ಮನಿ, ಕಿಕ್, ಮನಿ ಬ್ಯಾಕ್ ಗ್ಯಾರಂಟಿ, ಡರ್ಟಿ ಪಾಲಿಟಿಕ್ಸ್ ಇವರು ನಟಿಸಿರುವ ಪ್ರಮುಖ ಚಿತ್ರಗಳು.
ʼತಾರಕ್ ಮೆಹ್ತಾʼ ನಟ ಗುರುಚರಣ್ ಸಿಂಗ್ ನಾಪತ್ತೆ
ಕೆಲ ತಿಂಗಳ ಹಿಂದೆಯಷ್ಟೇ ʼತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ಧಾರಾವಾಹಿ ಖ್ಯಾತಿಯ ನಟ ಗುರುಚರಣ್ ಸಿಂಗ್ ನಿಗೂಢವಾಗಿ ನಾಪತ್ತೆಯಾಗಿದ್ದರು. ಗುರುಚರಣ್ ಸಿಂಗ್ ಕಾಣೆಯಾಗಿರುವ ಬಗ್ಗೆ ಅವರ ತಂದೆ ದೂರು ದಾಖಲಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿದ್ದವು. ಏಪ್ರಿಲ್ 22ರಂದು ಬೆಳಿಗ್ಗೆ 8:30ರ ಸುಮಾರಿಗೆ ಗುರುಚರಣ್ ಸಿಂಗ್ ಅವರು ಮುಂಬೈಗೆ ಹೋಗಲು ವಿಮಾನ ನಿಲ್ದಾಣಕ್ಕೆ ಹೊರಟಿದ್ದರು. ಆದರೆ, ಅವರು ಮುಂಬೈ ತಲುಪಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಸಿಂಗ್ ಅವರ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದರು.
ಗುರುಚರಣ್ ಸಿಂಗ್ ಪತ್ತೆಗಾಗಿ ಹಲವು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿ, ತನಿಖೆ ಆರಂಭಿಸಿದ್ದರು. ಕೆಲವೇ ದಿನಗಳಲ್ಲಿ ಪೊಲೀಸರು ಗುರುಚರಣ್ ಸಿಂಗ್ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.
ಈ ಸುದ್ದಿಯನ್ನೂ ಓದಿ: ಒಂಬತ್ತು ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿ ಪತ್ತೆ