Sunday, 24th November 2024

Sunita Williams : ಬಾಹ್ಯಾಕಾಶ ಕೇಂದ್ರದಲ್ಲಿ ದೀಪಾವಳಿ ಆಚರಿಸಿ, ಶುಭಾಶಯ ತಿಳಿಸಿದ ಸುನೀತಾ ವಿಲಿಯಮ್ಸ್

Sunita Williams

ಬೆಂಗಳೂರು: ಭಾರತೀಯ ಮೂಲದ ನಾಸಾ ಗಗನಯಾತ್ರಿ ಸುನೀತಾ ವಿಲಿಯಮ್ಸ್ (Sunita Williams) ಪ್ರಸ್ತುತ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿದ್ದಾರೆ. ಅಲ್ಲೇ ದೀಪಾವಳಿ ಆಚರಿಸಿರುವ ಅವರು ಅಮೆರಿಕ ಮತ್ತು ಪ್ರಪಂಚದಾದ್ಯಂತ ಹಬ್ಬ ಆಚರಿಸುವ ಜನರಿಗೆ ದೀಪಾವಳಿ ಶುಭಾಶಯ ಹೇಳಿದ್ದಾರೆ. ಬಾಹ್ಯಾಕಾಶದಿಂದ ರೆಕಾರ್ಡ್ ಮಾಡಿದ ವೀಡಿಯೊ ಸಂದೇಶದಲ್ಲಿ, ವಿಲಿಯಮ್ಸ್ ಭೂಮಿಯಿಂದ, 260 ಮೈಲಿ ಎತ್ತರದಲ್ಲಿ ದೀಪಾವಳಿ ಆಚರಿಸುವ ತನ್ನ ವಿಶಿಷ್ಟ ಅನುಭವವನ್ನು ಹೇಳಿಕೊಂಡರು.

ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಶುಭಾಶಯಗಳು ಎಂದು ಅವರು ಹೇಳಿದ್ದಾರೆ. ಶ್ವೇತಭವನದಲ್ಲಿ ಮತ್ತು ಪ್ರಪಂಚದಾದ್ಯಂತ ಇಂದು ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಲು ನಾನು ಬಯಸುತ್ತೇನೆ ಎಂದು ವಿಡಿಯೊ ಸಂದೇಶ ಕಳುಹಿಸಿದ್ದಾರೆ.

ವಿಲಿಯಮ್ಸ್ ತನ್ನ ಸಂದೇಶದಲ್ಲಿ ತನ್ನ ಕುಟುಂಬದ ಸಾಂಸ್ಕೃತಿಕ ಬೇರುಗಳನ್ನು ಉಳಿಸಲು ತಮ್ಮ ತಂದೆ ಮಾಡಿರುವ ಪ್ರಯತ್ನಗಳ ಬಗ್ಗೆ ಮಾತನಾಡಿದರು. ದೀಪಾವಳಿ ಮತ್ತು ಇತರ ಮಹತ್ವದ ಭಾರತೀಯ ಹಬ್ಬಗಳನ್ನು ಅವರು ಹೇಗೆ ಬಣ್ಣಿಸಿದ್ದಾರೆ ಎಂದು ಹೇಳಿದರು.

ಈ ವರ್ಷ ಬಾಹ್ಯಾಕಾಶ ಕೇಂದ್ರದಲ್ಲಿ ಭೂಮಿಯಿಂದ 260 ಮೈಲಿ ಎತ್ತರದಿಂದ ದೀಪಾವಳಿ ಆಚರಿಸುವ ವಿಶಿಷ್ಟ ಅವಕಾಶ ನನಗೆ ಸಿಕ್ಕಿದೆ. ನನ್ನ ತಂದೆ ದೀಪಾವಳಿ ಮತ್ತು ಇತರ ಭಾರತೀಯ ಹಬ್ಬಗಳ ಬಗ್ಗೆ ನಮಗೆ ಕಲಿಸುವ ಮೂಲಕ ತಮ್ಮ ಸಾಂಸ್ಕೃತಿಕ ಬೇರುಗಳನ್ನು ಉಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Joe Biden: ಶ್ವೇತ ಭವನದಲ್ಲಿ ದೀಪಾವಳಿ ಆಚರಣೆ; ದೀಪ ಬೆಳಗಿ ಬೈಡೆನ್‌ ಭಾವುಕ ನುಡಿ

ಶ್ವೇತಭವನದಲ್ಲಿ ನಡೆದ ವಿಶೇಷ ದೀಪಾವಳಿ ಆಚರಣೆಯೂ ಬಾಹ್ಯಾಕಾಶದಲ್ಲಿ ಹಬ್ಬದ ಆಚರಣೆಯೂ ಭಾರತೀಯ ಸಾಂಸ್ಕೃತಿಕ ಮೂಲಗಳನ್ನು ಬಣ್ಣಿಸುತ್ತದೆ. ಬೋಯಿಂಗ್‌ನ ಸ್ಟಾರ್‌ಲೈನರ್‌ ಬಾಹ್ಯಾಕಾಶ ನೌಕೆಯಲ್ಲಿ ಸಹ ಗಗನಯಾತ್ರಿ ಬುಚ್ ವಿಲ್ಮೋರ್ ಅವರೊಂದಿಗೆ ಬಾಹ್ಯಾಕಾಶಕ್ಕೆ ತೆರಳಿದ್ದ ವಿಲಿಯಮ್ಸ್ ಜೂನ್ 6, 2023ರಿಂದ ಐಎಸ್ಎಸ್‌ನಲ್ಲಿಯೇ ಇದ್ದಾರೆ.

ಆರಂಭದಲ್ಲಿ ಒಂದು ವಾರದ ಪರೀಕ್ಷಾ ಹಾರಾಟವಾಗಿ ನಿಗದಿಪಡಿಸಲಾಗಿತ್ತು, ಬಾಹ್ಯಾಕಾಶ ನೌಕೆಯನ್ನು ಅದರ ಸಿಬ್ಬಂದಿ ಇಲ್ಲದೆ ಭೂಮಿಗೆ ಹಿಂದಿರುಗಿಸುವ ನಿರ್ಧಾರದಿಂದಾಗಿ ಕಾರ್ಯಾಚರಣೆ ವಿಸ್ತರಿಸಲಾಗಿದೆ.

ವಿಲ್ಮೋರ್ ಮತ್ತು ವಿಲಿಯಮ್ಸ್ ಅವರನ್ನು ಅಕಾಲಿಕವಾಗಿ ಮರಳಿ ಕರೆತರುವುದು “ತುಂಬಾ ಅಪಾಯಕಾರಿ” ಎಂದು ನಾಸಾ ಭಾವಿಸಿದೆ. ಪರಿಣಾಮವಾಗಿ ಸುಮಾರು ಎಂಟು ತಿಂಗಳ ವಿಸ್ತೃತ ವಾಸ್ತವ್ಯ ಮಾಡಬೇಕಾಗಿದೆ. ಅವರು ಫೆಬ್ರವರಿ 2025 ರಲ್ಲಿ ಭೂಮಿಗೆ ಮರಳುವ ನಿರೀಕ್ಷೆಯಿದೆ.