Thursday, 12th December 2024

ಪತ್ನಿಯ ಒಪ್ಪಿಗೆಯನ್ನು ಉಲ್ಲಂಘಿಸಲು ಪತಿಗೆ ಯಾವುದೇ ಹಕ್ಕು ಇಲ್ಲ; ಆದರೆ…: ಕೇಂದ್ರ ಹೇಳಿದ್ದೇನು?

Supreme Court

ನವದೆಹಲಿ: ವೈವಾಹಿಕ ಅತ್ಯಾಚಾರ (Marital rape) ವಿನಾಯಿತಿಯನ್ನು ಕೇಂದ್ರ ಸರ್ಕಾರ (Centre) ಗುರುವಾರ ಸುಪ್ರೀಂ ಕೋರ್ಟ್‌ (Supreme Court)ನಲ್ಲಿ ಸಮರ್ಥಿಸಿಕೊಂಡಿದ್ದು, ಮದುವೆಗೆ ಅತ್ಯಾಚಾರದ ಕಠಿಣ ಶಿಕ್ಷೆಯ ನಿಬಂಧನೆಗಳನ್ನು ವಿಧಿಸುವುದು ವಿವಾಹ ವ್ಯವಸ್ಥೆಯ ಮೇಲೆ ಗಂಭೀರ ಸಾಮಾಜಿಕ-ಕಾನೂನು ಪರಿಣಾಮ ಬೀರಬಹುದು ಎಂದು ವಾದಿಸಿದೆ. ಹೀಗಾಗಿ ವೈವಾಹಿಕ ಸಂಬಂಧದಲ್ಲಿ ನಡೆಯುವ ಅತ್ಯಚಾರವನ್ನು ಕ್ರಿಮಿನಲ್‌ ಅಪರಾಧವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

“ಇದು ಸಮಾಜದ ಮೇಲೆ ನೇರ ಪರಿಣಾಮ ಬೀರುವ ಸಾಮಾಜಿಕ ವಿಷಯವಾಗಿರುವುದರಿಂದ ಸುಪ್ರೀಂ ಕೋರ್ಟ್ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸಬಾರದು” ಎಂದು ಕೇಂದ್ರವು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. ಅಸ್ತಿತ್ವದಲ್ಲಿರುವ ಅತ್ಯಾಚಾರಕ್ಕೆ ಸಂಬಂಧಿಸಿದ ಕಾನೂನುಗಳನ್ನು ಬೆಂಬಲಿಸಿದ ಸರ್ಕಾರ, ವಿವಾಹಿತ ಮಹಿಳೆಯ ಹಕ್ಕನ್ನು ಸಂರಕ್ಷಿಸಲು ಸಂಸತ್ತು ಪರಿಹಾರ ಮಾರ್ಗಗಳನನು ಸೂಚಿಸಿದೆ ಎಂದು ಹೇಳಿದೆ.

“ಸರಿಯಾಗಿ ಸಮಾಲೋಚನೆ ನಡೆಸದೆ ಈ ವಿಷಯವನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಕೇಂದ್ರ ಹೇಳಿದೆ. ಪತ್ನಿಯ ಒಪ್ಪಿಗೆಯನ್ನು ಉಲ್ಲಂಘಿಸಲು ಪತಿಗೆ ಯಾವುದೇ ಮೂಲಭೂತ ಹಕ್ಕು ಇಲ್ಲವಾದರೂ ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವುದು ವಿವಾಹ ಮಹತ್ವದ ಭಾಗವಾಗಿರುವ ಭಾರತದಂತಹ ದೇಶದಲ್ಲಿ ಕಠಿಣ ಮತ್ತುಅಸಮಂಜಸ ಕ್ರಮ ಎನಿಸಿಕೊಳ್ಳಲಿದೆ ಎಂದಿದೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ವಿನಾಯಿತಿ 2ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಪ್ರತಿಕ್ರಿಯೆಯಾಗಿ ಸರ್ಕಾರ ತನ್ನ ನಿಲುವನ್ನು ಸಲ್ಲಿಸಿದೆ. ಇದು ಅತ್ಯಾಚಾರ ನಡೆಸಿದ್ದು ಸಂತ್ರಸ್ತೆಯ ಪತಿಯಾಗಿದ್ದರೆ ಆತನನ್ನು ವಿಚಾರಣೆಗೆ ಒಳಪಡಿಸುವುದರಿಂದ ವಿನಾಯಿತಿ ನೀಡುತ್ತದೆ. ಮಹಿಳೆಯರ ಸುರಕ್ಷತೆ ಖಚಿತಪಡಿಸಿಕೊಳ್ಳಲು ಐಪಿಸಿಯ ಸೆಕ್ಷನ್ 354, 354 ಎ, 354 ಬಿ ಮತ್ತು 498 ಎ ಮತ್ತು ಕೌಟುಂಬಿಕ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ ಸೇರಿದಂತೆ ಪರ್ಯಾಯ ಕಾನೂನು ನಿಬಂಧನೆಗಳಿವೆ ಎಂದು ಅಫಿಡವಿಟ್ ವಿವರಿಸಿದೆ.

ವೈವಾಹಿಕ ಸಂಬಂಧಗಳ ಮೇಲೆ ಅತ್ಯಾಚಾರ ಕಾನೂನುಗಳನ್ನು ಅಳವಡಿಸುವುದರಿಂದದಾಗಬಹುದಾದ ದೂರಗಾಮಿ ಪರಿಣಾಮಗಳ ಬಗ್ಗೆ ಸರ್ಕಾರ ಕಳವಳ ವ್ಯಕ್ತಪಡಿಸಿದೆ. ಪತ್ನಿಯ ಸಮ್ಮತಿ ನಿರ್ಣಾಯಕ ಅಂಶವಾಗಿದ್ದರೂ ಅತ್ಯಾಚಾರ ಕಾನೂನುಗಳಿಗೆ ಸಂಬಂಧಿಸಿದ ಕಠಿಣ ಶಿಕ್ಷೆಗಳನ್ನು ವಿಧಿಸುವುದು ವಿವಾಹ ವ್ಯವಸ್ಥೆಯ ಪ್ರಾಧಾನ್ಯತೆಗೆ ಅಡ್ಡಿಪಡಿಸಬಹುದು ಮತ್ತು ವೈವಾಹಿಕ ಸಂಬಂಧಗಳಲ್ಲಿ ಗಂಭೀರ ಪರಿಣಾಮ ಬೀರಬಹುದು ಎಂದು ತಿಳಿಸಿದೆ.

ವೈವಾಹಿಕ ಅತ್ಯಾಚಾರ ಕಾನೂನುಗಳ ಸಂಭಾವ್ಯ ದುರುಪಯೋಗದ ಬಗ್ಗೆಯೂ ಅಫಿಡವಿಟ್‌ನಲ್ಲಿ ಕೇಂದ್ರ ಕಳವಳ ವ್ಯಕ್ತಪಡಿಸಿದೆ. ವಿನಾಯಿತಿಯನ್ನು ರದ್ದುಗೊಳಿಸುವುದು ಸುಳ್ಳು ಆರೋಪಗಳ ಹೆಚ್ಚಳಕ್ಕೆ ಕಾರಣವಾಗಬಹುದು ಮತ್ತು ಮದುವೆಗಳನ್ನು ಅಸ್ಥಿರಗೊಳಿಸಬಹುದು ಎಂದು ಎಚ್ಚರಿಸಿದೆ.

ಈ ಸುದ್ದಿಯನ್ನೂ ಓದಿ: Supreme Court: ನಾಗರಿಕರ ಸುರಕ್ಷತೆ ಮುಖ್ಯ.. ಅತಿಕ್ರಮಣ ಮಾಡಿರುವ ದೇವಸ್ಥಾನ, ಮಸೀದಿ ತೆರವು ಖಂಡಿತ; ಸುಪ್ರೀಂ ಕೋರ್ಟ್‌

ದಿಲ್ಲಿಯಲ್ಲಿ 2012ರ ಡಿಸೆಂಬರ್‌ನಲ್ಲಿ ಅರೆವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರದ ಹಿನ್ನೆಲೆಯಲ್ಲಿ ಕ್ರಿಮಿನಲ್ ಕಾನೂನುಗಳಲ್ಲಿ ತಿದ್ದುಪಡಿಗಳನ್ನು ಪ್ರಸ್ತಾಪಿಸಲು ರಚಿಸಲಾದ ನ್ಯಾಯಮೂರ್ತಿ ಜೆ.ಎಸ್. ವರ್ಮಾ ಸಮಿತಿಯು 2013ರಲ್ಲಿ ತನ್ನ 644-ಪುಟಗಳ ವರದಿಯನ್ನು ಅಂತಿಮಗೊಳಿಸಿತ್ತು. “ವೈವಾಹಿಕ ಅತ್ಯಾಚಾರಕ್ಕೆ ವಿನಾಯಿತಿಯನ್ನು ತೆಗೆದುಹಾಕಬೇಕು” ಮತ್ತು ಅತ್ಯಾಚಾರ ಅಥವಾ ಲೈಂಗಿಕ ಉಲ್ಲಂಘನೆಯ ಅಪರಾಧಗಳ ವಿಚಾರದಲ್ಲಿ ಅಪರಾಧಿ ಅಥವಾ ಬಲಿಪಶುವಿನ ನಡುವಿನ ವೈವಾಹಿಕ ಅಥವಾ ಇತರ ಸಂಬಂಧವು ಮಾನ್ಯವಾದ ರಕ್ಷಣೆಯಲ್ಲ ಎಂದು ಕಾನೂನು ಸೂಚಿಸಬೇಕು” ಎಂಬ ಹೇಳಿತ್ತು.