Sunday, 15th December 2024

Supreme Court: ಶಂಭು ಗಡಿಯಲ್ಲಿ ರೈತರ ಸಮಸ್ಯೆ ಬಗೆಹರಿಸಲು ವಿಶೇಷ ಸಮಿತಿ ರಚನೆ; ಸುಪ್ರೀಂ ಮಹತ್ವದ ಆದೇಶ

supreme court

ನವದೆಹಲಿ: ಪಂಜಾಬ್( Punjab) ಮತ್ತು ಹರಿಯಾಣ(Haryana) ನಡುವಿನ ಶಂಭು ಗಡಿ(Shambhu Border)ಯಲ್ಲಿ ರೈತರ ಆಂದೋಲನದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಸುಪ್ರೀಂಕೋರ್ಟ್(Supreme Court)ಸೋಮವಾರ ಉನ್ನತಾಧಿಕಾರಿಗಳ ಸಮಿತಿಯನ್ನು ರಚಿಸಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಇದ್ದ ದ್ವಿಸದಸ್ಯಪೀಠವು ಪ್ರತಿಭಟನಾನಿತರ ರೈತರ ಪ್ರಮುಖ ಸಮಸ್ಯೆಗಳನ್ನು ಗುರುತಿಸಲು ಮತ್ತು  ಅವುಗಳನ್ನು ತ್ವರಿತವಾಗಿ ಪರಿಹರಿಸಲು ಸಮಿತಿಗೆ ಸೂಚಿಸಿತು. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನವಾಬ್ ಸಿಂಗ್ ನೇತೃತ್ವದ ಸಮಿತಿಯು ಪ್ರತಿಭಟನಾನಿರತ ರೈತರೊಂದಿಗೆ ಮಾತುಕತೆ ನಡೆಸಿ  ಅವರ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಶಂಭು ಗಡಿಯಲ್ಲಿ ಜನ ಸಾಮಾನ್ಯರ ಪ್ರಯಾಣಕ್ಕೆ ಅಡ್ಡಿಯಾಗುತ್ತಿರುವ ತಮ್ಮ ಟ್ರ್ಯಾಕ್ಟರ್‌ಗಳು, ಟ್ರಾಲಿಗಳು ಇತ್ಯಾದಿಗಳನ್ನು ತೆಗೆದುಹಾಕಲು ಧರಣಿ ನಿರತ ರೈತರನ್ನು ಮನವೊಲಿಸುವಂತೆ ಸುಪ್ರೀಂ ಕೋರ್ಟ್ ಸಮಿತಿಗೆ ಸೂಚನೆ ನೀಡಿದೆ. ಇನ್ನು ಸಮಿತಿಯ ಮೊದಲ ಸಭೆಯನ್ನು ಒಂದು ವಾರದೊಳಗೆ ಕರೆಯುವಂತೆ ನ್ಯಾಯಮೂರ್ತಿ ಸಿಂಗ್ ಅವರಿಗೆ ಸೂಚಿಸಲಾಗಿದೆ.

ಹರಿಯಾಣದಿಂದ, ಸಮಿತಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ನ್ಯಾಯಮೂರ್ತಿ ನವಾಬ್ ಸಿಂಗ್, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಬಿಎಸ್ ಸಂಧು ಮತ್ತು ಡೇವಿಂದರ್ ಶರ್ಮಾ, ರಂಜಿತ್ ಸಿಂಗ್ ಘುಮ್ಮನ್ ಮತ್ತು ಸುಖಪಾಲ್ ಸಿಂಗ್,  ಚೌಧರಿ ಚರಣ್ ಸಿಂಗ್ ಹರಿಯಾಣ ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊಫೆಸರ್ ಬಿ ಆರ್ ಕಾಂಬೋಜ್ ಅವರು ಈ ಸಮಿತಿಯಲ್ಲಿದ್ದಾರೆ.

ಪ್ರತಿಭಟನಾನಿರತ ರೈತರಿಗೆ ರಾಜಕೀಯ ಪಕ್ಷಗಳಿಂದ ಸುರಕ್ಷಿತ ಅಂತರದಲ್ಲಿ ಇರುವಂತೆ ಮತ್ತು ಕಾರ್ಯಸಾಧ್ಯವಲ್ಲದ ಬೇಡಿಕೆಗಳಿಗೆ ಒತ್ತಾಯಿಸದಂತೆ ಎಚ್ಚರಿಕೆ ನೀಡಿದೆ. ರೈತರ ಸಮಸ್ಯೆಗಳನ್ನು ರಾಜಕೀಯಗೊಳಿಸಬಾರದು. ಅಲ್ಲದೇ ಈ ಪ್ರತಿಭಟನೆಯಲ್ಲಿ ಶಾಂತಿಯುತವಾಗಿ ಮತ್ತೊಂದೆಡೆ ಸ್ಥಳಾಂತರಿಸುವ ಬಗ್ಗೆ ಸಮಿತಿ ರೈತರೊಂದಿಗೆ ಚರ್ಚೆ ನಡೆಸಬೇಕಿದೆ ಎಂದು ಸುಪ್ರೀಂಕೋರ್ಟ್‌ ಹೇಳಿದೆ

ಫೆಬ್ರವರಿ 13 ರಿಂದ ಪ್ರತಿಭಟನಾ ನಿರತ ರೈತರು ಮೊಕ್ಕಾಂ ಹೂಡಿರುವ ಅಂಬಾಲ ಸಮೀಪದ ಶಂಭು ಗಡಿಯಲ್ಲಿ ನಿರ್ಮಿಸಿರುವ ಬ್ಯಾರಿಕೇಡ್‌ಗಳನ್ನು ಒಂದು ವಾರದೊಳಗೆ ತೆಗೆದುಹಾಕುವಂತೆ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಹರಿಯಾಣ ಸರ್ಕಾರದ ಮನವಿಯನ್ನು ನ್ಯಾಯಾಲಯವು ವಿಚಾರಣೆ ನಡೆಸಿದೆ.

ಅವರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಅಗ್ರಹಿಸಿ  ‘ಸಂಯುಕ್ತ ಕಿಸಾನ್ ಮೋರ್ಚಾ’ (ರಾಜಕೀಯೇತರ) ಮತ್ತು ‘ಕಿಸಾನ್ ಮಜ್ದೂರ್ ಮೋರ್ಚಾ’ ರೈತರು ದೆಹಲಿಗೆ ಮೆರವಣಿಗೆ ನಡೆಸುವುದಾಗಿ ಘೋಷಿಸಿದ ನಂತರ ಹರಿಯಾಣ ಸರ್ಕಾರ ಫೆಬ್ರವರಿಯಲ್ಲಿ ಅಂಬಾಲಾ-ನವದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಸ್ಥಾಪಿಸಿತ್ತು.