ನವದೆಹಲಿ: ಮೂವರು ಮಹಿಳೆಯರು ಸೇರಿದಂತೆ ಒಂಬತ್ತು ಹೊಸ ನ್ಯಾಯಮೂರ್ತಿಗಳನ್ನು ಗುರುವಾರ ಸುಪ್ರೀಂ ಕೋರ್ಟ್’ಗೆ ನೇಮಕ ಮಾಡಲಾಗಿದೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ತಮ್ಮ ನೇಮಕಾತಿ ವಾರಂಟ್ ಗಳಿಗೆ ಸಹಿ ಹಾಕಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಉನ್ನತ ನ್ಯಾಯಾಲಯದ ಹೊಸ ನ್ಯಾಯಮೂರ್ತಿಗಳಲ್ಲಿ ನ್ಯಾ.ಬಿ.ವಿ. ನಾಗರತ್ನಾ ಅವರು ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಆಗಲಿದ್ದಾರೆ.
ನ್ಯಾಯಮೂರ್ತಿ ಬೆಲಾ ಎಂ ತ್ರಿವೇದಿ, ನ್ಯಾಯಮೂರ್ತಿ ಹಿಮಾ ಕೊಹ್ಲಿ, ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್, ನ್ಯಾಯಮೂರ್ತಿ ಎಂ.ಎಂ.ಸುಂದ್ರೇಶ್ ಮತ್ತು ಹಿರಿಯ ವಕೀಲ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಸೇರಿದ್ದಾರೆ. ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕಾ, ವಿಕ್ರಮ್ ನಾಥ್ ಮತ್ತು ಜಿತೇಂದ್ರ ಕುಮಾರ್ ಮಹೇಶ್ವರಿ ಕೂಡ ಸುಪ್ರೀಂ ಕೋರ್ಟ್ ಗೆ ನೇಮಕಗೊಂಡವರಲ್ಲಿ ಸೇರಿದ್ದಾರೆ.