Friday, 22nd November 2024

ಪ್ರತಿಭಟಿಸುವ ಹಕ್ಕಿದೆ, ರಸ್ತೆಗಳನ್ನು ನಿರ್ಬಂಧಿಸುವಂತಿಲ್ಲ: ಸುಪ್ರೀಂ ಪೀಠ

ನವದೆಹಲಿ: ದೆಹಲಿ ಗಡಿಯಲ್ಲಿ ರಸ್ತೆಗಳನ್ನು ನಿರ್ಬಂಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ರೈತರಿಗೆ ಪ್ರತಿಭಟನೆ ಮಾಡುವ ಹಕ್ಕು ಇದ್ದರೂ, ಅವರು ರಸ್ತೆಗಳನ್ನು ಅನಿರ್ದಿಷ್ಟ ಕಾಲ ನಿರ್ಬಂಧಿಸು ವಂತಿಲ್ಲ ಎಂದು ನ್ಯಾ.ಸಂಜಯ್ ಕಿಶನ್ ಕೌಲ್ ನೇತೃತ್ವದ ಪೀಠ ಹೇಳಿದೆ. ಇದೇ ವೇಳೆ ಸೂಕ್ತ ಪರಿಹಾರ ಕಂಡುಕೊಳ್ಳು ವಂತೆ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. ಇನ್ನು ಪ್ರಕರಣದಲ್ಲಿ ಕಕ್ಷಿದಾರರಾಗಿರುವ ರೈತ ಸಂಘಗಳಿಗೆ ಮೂರು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 7ಕ್ಕೆ ಮುಂದೂ ಡಿದೆ.

ಉತ್ತರ ಪ್ರದೇಶದ ನೋಯ್ಡಾ ನಿವಾಸಿಯೊಬ್ಬರು ಪ್ರತಿಭಟನಾ ನಿರತ ರೈತರ ರಸ್ತೆ ತಡೆಗೆ ಸಂಬಂಧಿಸಿದಂತೆ ಪರಿಹಾರ ಕೋರಿ ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ಆಲಿಸಿತು. ತಾವು ವೈದ್ಯಕೀಯ ಸಮಸ್ಯೆಗಳಿರುವ ಏಕ ಪೋಷಕ ತಾಯಿಯಾಗಿದ್ದು, ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸುವುದು ದುಃಸ್ವಪ್ನವಾಗಿದೆ ಎಂದು ಅರ್ಜಿ ದಾರರಾದ ಮೋನಿಕಾ ಅಗರ್‌ವಾಲ್‌ ಹೇಳಿದ್ದಾರೆ.

ರೈತರಿಗೆ ಪ್ರತಿಭಟಿಸುವ ಹಕ್ಕಿದ್ದಂತೆ ಜನರಿಗೆ ರಸ್ತೆಗಳಲ್ಲಿ ಹೋಗುವ ಹಕ್ಕಿದೆ. ಹೀಗಾಗಿ ಅನಿರ್ದಿಷ್ಟವಧಿಗೆ ಅದನ್ನು ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಂ ಎಂ ಸುಂದ್ರೇಶ್ ಅವರನ್ನೊಳಗೊಂಡ ಪೀಠ ಹೇಳಿದೆ.