ನವದೆಹಲಿ: ಉತ್ತರ ಪ್ರದೇಶದ ಬಹ್ರೈಚ್(Bahraich Violence)ನಲ್ಲಿ ಕೋಮು ಘರ್ಷಣೆಯ ಬಳಿಕ ಆರೋಪಿಗಳಿಗೆ ಸೇರಿದ್ದ ಕಟ್ಟಡಗಳ ಧ್ವಂಸಕ್ಕೆ ಆದೇಶ ನೀಡಿರುವ ಉತ್ತರಪ್ರದೇಶ ಸರ್ಕಾರ(Uttara Pradesh Government)ದ ವಿರುದ್ಧ ಸುಪ್ರೀಂ ಕೋರ್ಟ್(Supreme Court) ಗರಂ ಆಗಿದೆ. ಕೆಲವು ದಿನಗಳ ಹಿಂದೆಯಷ್ಟೇ ಆರೋಪಿ ಅಥವಾ ಅಪರಾಧಿಗೆ ಸೇರಿದ ಆಸ್ತಿ-ಪಾಸ್ತಿಯ ಧ್ವಂಸ ನೀತಿಯ ವಿರುದ್ಧ ಸುಪ್ರೀಂ ಕೋರ್ಟ್ ಚಾಟಿ ಬೀಸಿತ್ತು. ಇದೀಗ ಮತ್ತೆ ಉತ್ತರಪ್ರದೇಶ ಸರ್ಕಾರ ಇದೇ ನೀತಿಯನ್ನು ಅನುಸರಿಸುತ್ತಿರುವ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೇ ಸರ್ವೋಚ್ಚ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಅದರ ಪರಿಣಾಮ ಎದುರಿಸಲು ಬಯಸುವುದಾದರೆ ಸರ್ಕಾರ ಅಂತಹ ನೀತಿಯನ್ನು ಅನುಸರಿಸಲಿ ಎಂದು ಸುಪ್ರೀಂ ಕೋರ್ಟ್ ಬಹಳ ಖಾರವಾಗಿಯೇ ನುಡಿದಿದೆ.
ಉತ್ತರಪ್ರದೇಶ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಇದ್ದ ನ್ಯಾಯಪೀಠ, ಒಂದು ವೇಳೆ ಕಟ್ಟಡ ಅಕ್ರಮ ನಿರ್ಮಾಣ ಆಗಿದ್ದರೆ ಅದರ ಧ್ವಂಸಕ್ಕೆ ಆದೇಶ ಹೊರಡಿಸಿರುವುದಕ್ಕೆ ಕೋರ್ಟ್ ಆಕ್ಷೇಪ ಇಲ್ಲ. ಆದರೆ ಒಂದು ಪ್ರಕರಣದಲ್ಲಿ ಆರೋಪಿ ಅಥವಾ ಅಪರಾಧಿಯಾಗಿದ್ದಾರೆ ಎಂಬ ಕಾರಣಕ್ಕಾಗಿ ಅವರಿಗೆ ಸಂಬಂಧಿಸಿದ ಕಟ್ಟಡ ಧ್ವಂಸಗೊಳಿಸುವು ಸರಿಯಾದ ಕ್ರಮವಲ್ಲ ಎಂದು ಹೇಳಿದೆ. ಇನ್ನು ಪ್ರಕರಣದ ವಿಚಾರಣೆಯನ್ನು ನಾಳೆ ಮುಂದೂಡಿರುವ ಕೋರ್ಟ್, ಅಲ್ಲಿವರೆಗೆ ಯಾವುದೇ ಕ್ರಮ ಜರುಗಿಸದಂತೆ ಉತ್ತರಪ್ರದೇಶ ಸರ್ಕಾರಕ್ಕೆ ಆದೇಶ ಹೊರಡಿಸಿದೆ.
ಉತ್ತರದ ರಾಜ್ಯಗಳಲ್ಲಿ ಇತ್ತೀಚೆಗೆ ಬುಲ್ಡೋಜರ್ ಸದ್ದು ಜೋರಾಗಿದೆ. ಆರೋಪಿಯೊಬ್ಬ ಹಲವು ಪ್ರಕರಣಗಳಲ್ಲಿ ಭಾಗಿಯಾದ ದೂರು ಬಂದರೆ ಅಥವಾ ಹೀನ ಅಪರಾಧ ಎಸಗಿದ್ದು ಕಂಡುಬಂದರೆ ಆತನನ್ನು ನ್ಯಾಯಾ ಲಯ ದೋಷಿ ಎಂದು ಪರಿಗಣಿಸುವ ಮೊದಲೇ ಆತನ ಮನೆ, ಮಳಿಗೆಗಳನ್ನು ಧ್ವಂಸಗೊಳಿಸುವ ಈ ಪ್ರಕ್ರಿಯೆ ಉತ್ತರಪ್ರದೇಶ, ಹರಿಯಾಣ, ಅಸ್ಸಾಂ, ಉತ್ತರಾಖಂಡ್, ಬಿಹಾರ,ರಾಜಸ್ತಾನ, ಮಧ್ಯಪ್ರದೇಶ, ಆಂಧ್ರ, ಮಹಾರಾಷ್ಟ್ರ ಮತ್ತಿತರ ರಾಜ್ಯಗಳಲ್ಲಿ ಇತ್ತೀಚೆಗೆ ಚಾಲ್ತಿಯಲ್ಲಿದೆ.
ಇದೀಗ ಸುಪ್ರೀಕೋರ್ಟ್ ಆಡಳಿತ ವ್ಯವಸ್ಥೆಯ ಈ ನ್ಯಾಯ ಪ್ರಕ್ರಿಯೆಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಗಳಾದ ಮಾತ್ರಕ್ಕೆ ಅವರ ಮನೆಗಳನ್ನು ಕೆಡವಲು ಹೇಗೆ ಸಾಧ್ಯ ಎಂದು ಕೇಂದ್ರ ಸರಕಾರವನ್ನು ಪ್ರಶ್ನಿಸಿದೆ. ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ.ವಿಶ್ವನಾಥನ್ ಅವರ ಪೀಠ ಈ ಸಂಬಂಧ ರಾಷ್ಟ್ರ ಮಟ್ಟದಲ್ಲಿ ಮಾರ್ಗಸೂಚಿ ರೂಪಿಸಲು ನಿರ್ಧರಿಸಿ, ‘ಯಾವುದೇ
ಪ್ರಕರಣದಲ್ಲಿ ಒಬ್ಬ ವ್ಯಕ್ತಿ ತಪ್ಪಿತಸ್ಥನೆಂದು ಕಂಡುಬಂದರೂ, ಕಾನೂನು ರೀತಿಯಲ್ಲಿ ಮಾತ್ರ ಅವನಿಗೆ ಶಿಕ್ಷೆ ನೀಡಬೇಕು. ಅದು ಬಿಟ್ಟು ಆತನ ಮನೆ ಕೆಡವುದಲ್ಲ. ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡುವ ಬಗ್ಗೆ
ಮಾರ್ಗಸೂಚಿಗಳನ್ನು ರೂಪಿಸಬೇಕಾಗಿದೆ’ ಎಂದು ತಿಳಿಸಿತ್ತು.
ಬಹ್ರೈಚ್ ಘಟನೆ ಏನು?
ದುರ್ಗಾ ದೇವಿಯ ವಿಗ್ರಹದ ವಿಸರ್ಜನಾ ಮೆರವಣಿಗೆ ಮನ್ಸೂರ್ ಗ್ರಾಮದ ಮಹರಾಜ್ಗಂಜ್ ಬಜಾರ್ ಮೂಲಕ ಹಾದುಹೋದಾಗ ಘರ್ಷಣೆ ನಡೆದಿದೆ. ರೆಹುವಾ ಮನ್ಸೂರ್ ಗ್ರಾಮದ ನಿವಾಸಿ ರಾಮ್ ಗೋಪಾಲ್ ಮಿಶ್ರಾ ಗುಂಪಿನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆತನ ಮೇಲೆ ಗುಂಡು ಹಾರಿಸಲಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಹತ್ಯೆಯ ನಂತರ ಈ ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಉಲ್ಬಣಗೊಂಡಿತು. ಬಳಿಕ ಫಖರ್ಪುರ ಪಟ್ಟಣ ಮತ್ತು ಇತರ ಸ್ಥಳಗಳಲ್ಲಿನ ಮೆರವಣಿಗೆಗಳನ್ನು ರದ್ದುಗೊಳಿಸಲಾಯಿತು. ಆದಾಗ್ಯೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಗ್ರಹ ವಿಸರ್ಜನೆಯನ್ನು ಮುಂದುವರಿಸಬೇಕು ಮತ್ತು ಅದು ಸರಿಯಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ಧಾರ್ಮಿಕ ಸಂಸ್ಥೆಗಳೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಆಡಳಿತಕ್ಕೆ ನಿರ್ದೇಶನ ನೀಡಿದರು.
ವಿಗ್ರಹವನ್ನು ವಿಸರ್ಜಿಸುವ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಲು ನಿರ್ದೇಶನ ನೀಡಲಾಯಿತು. ವಿವಿಧ ಗ್ರಾಮಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಬಹ್ರೈಚ್‌ನಲ್ಲಿ ಉಂಟಾದ ಕೋಮು ಗಲಭೆ ಹಿನ್ನೆಲೆಯಲ್ಲಿ ಹಾರ್ಡಿ ಪೊಲೀಸ್ ಠಾಣೆಯ ಮುಖ್ಯಸ್ಥ ಎಸ್.ಕೆ.ವರ್ಮಾ ಮತ್ತು ಮಾಹ್ಸಿ ಹೊರಠಾಣೆಯ ಉಸ್ತುವಾರಿ ಶಿವ ಕುಮಾರ್ ಅವರನ್ನು ಅಮಾನತುಗೊಳಿಸಲಾಗಿದೆ. ನಿರ್ಲಕ್ಷ್ಯ ತೋರಿದ ಸಿಬ್ಬಂದಿ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿ ಕ್ರಮ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಸುದ್ದಿಯನ್ನೂ ಓದಿ: PM degree row: ಪ್ರಧಾನಿ ಮೋದಿ ಪದವಿ ವಿವಾದ; ಸುಪ್ರೀಂನಿಂದ ಮಹತ್ವದ ಆದೇಶ-ಕೇಜ್ರಿವಾಲ್‌ಗೆ ಭಾರೀ ಹಿನ್ನಡೆ