ನವದೆಹಲಿ: ಪೂರ್ವಾನುಮತಿಯಿಲ್ಲದೆ ಕಟ್ಟಡ ನೆಲಸಮ ಮಾಡುವಂತಿಲ್ಲ ಎನ್ನುವ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ (Supreme Court) ಸೋಮವಾರ (ಸೆಪ್ಟೆಂಬರ್ 30) ಅಸ್ಸಾಂ ಸರ್ಕಾರಕ್ಕೆ ನ್ಯಾಯಾಂಗ ನಿಂದನೆಯ ನೋಟಿಸ್ ನೀಡಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠವು 3 ವಾರಗಳಲ್ಲಿ ಉತ್ತರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ ಮತ್ತು ಮುಂದಿನ ವಿಚಾರಣೆಯವರೆಗೆ ಪ್ರಸ್ತುತ ಇರುವ ಪರಿಸ್ಥಿತಿಯನ್ನು ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದೆ.
ಈ ತಿಂಗಳ ಆರಂಭದಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ತನ್ನ ಅನುಮತಿಯಿಲ್ಲದೆ ದೇಶದಲ್ಲಿ ಯಾವುದೇ ʼಬುಲ್ಡೋಜರ್ ನ್ಯಾಯʼ (Bulldozer Justice) ನಡೆಯಬಾರದು ಎಂದು ಹೇಳಿತ್ತು. ಅಕ್ಟೋಬರ್ 1ರವರೆಗೆ ಕಟ್ಟಡ ನೆಲಸಮಗೊಳಿಸುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. ಅಕ್ರಮ ನೆಲಸಮದ ಒಂದು ನಿದರ್ಶನವಿದ್ದರೂ ಅದು ಸಂವಿಧಾನದ ನೀತಿಗಳಿಗೆ ವಿರುದ್ಧವಾಗಿರುತ್ತದೆ ಎಂದು ಹೇಳಿತ್ತು.
Supreme Court directs to maintain status quo on Assam's Sonapur demolitions drive and issues notice to authorities concerned to contempt petition alleging wilful violation of the court's interim order dated September 17, directing that no demolition should take place across the… pic.twitter.com/YfjruOhbZr
— ANI (@ANI) September 30, 2024
ಅರ್ಜಿ ಸಲ್ಲಿಕೆ
ಹೀಗಿದ್ದೂ ಹಲವು ರಾಜ್ಯಗಳಲ್ಲಿ ಆರೋಪಿಗಳ ಆಸ್ತಿಗಳನ್ನು ನೆಲಸಮಗೊಳಿಸಲಾಗುತ್ತಿದೆ ಎಂದು ದೂರು ಸಲ್ಲಿಸಲಾಗಿದೆ. ಈ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ. ನಿರ್ದಿಷ್ಟ ಸಮುದಾಯದವರಿಗೆ ಸೇರಿದ ಕಟ್ಟಡಗಳನ್ನು ಮಾತ್ರ ನೆಲಸಮ ಮಾಡಲಾಗುತ್ತಿದೆ ಎಂದು ಅರ್ಜಿದಾರರು ದೂರಿದ್ದಾರೆ. ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕ ಮಧ್ಯ ಪ್ರದೇಶದಲ್ಲಿ ಸುಮಾರು 70 ಅಂಗಡಿಗಳನ್ನು ನೆಲಸಮಗೊಳಿಸಲಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
ರಾಜ್ಯ ಸರ್ಕಾರಗಳ ಬುಲ್ಡೋಜರ್ ನೀತಿ ಬಗ್ಗೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಈ ತಿಂಗಳ ಆರಂಭದಲ್ಲಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಯಾವುದೇ ಪ್ರಕರಣದಲ್ಲಿ ಅಪರಾಧ ಸಾಬೀತಾದ ಬಳಿಕ ಆತನಿಗೆ ಸಂಬಂಧಿಸಿದ ಆಸ್ತಿಯನ್ನು ಬುಲ್ಡೋಜರ್ ಮೂಲಕ ಧ್ವಂಸಗೊಳಿಸುವ ನೀತಿ ಸರಿಯಲ್ಲ. ವ್ಯಕ್ತಿಯನ್ನು ಅಪರಾಧಿಯೆಂದು ನಿರ್ಣಯಿಸಿದರೂ ಆಸ್ತಿಯನ್ನು ಕೆಡವಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದಾಗ್ಯೂ, ಸಾರ್ವಜನಿಕ ರಸ್ತೆಗಳಿಗೆ ಅಡ್ಡಿಪಡಿಸುವ ಯಾವುದೇ ಅಕ್ರಮವಾಗಿ ನಿರ್ಮಾಣಗೊಂಡಿರುವ ಕಟ್ಟಡವನ್ನು ಕೆಡವುವ ಬಗ್ಗೆ ಯಾವುದೇ ತಕರಾರಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿತ್ತು.
ಕ್ರಿಮಿನಲ್ ಮೊಕದ್ದಮೆಯ ಆರೋಪಿಗೆ ಸೇರಿದ ಮನೆಯನ್ನು ಹೇಗೆ ಕೆಡವಲಾಗುತ್ತದೆ ಎಂದು ಪ್ರಶ್ನಿಸಿದ್ದ ಸುಪ್ರೀಂ ಕೋರ್ಟ್ ಬುಲ್ಡೋಜರ್ ನ್ಯಾಯದ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತ್ತು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ದೇಶದಾದ್ಯಂತ ‘ಬುಲ್ಡೋಜರ್ ನೀತಿ ಜಾರಿಯಾಗದಂತೆ ಎಲ್ಲ ರಾಜ್ಯಗಳಿಗೆ ಖಡಕ್ ಸೂಚನೆ ನೀಡಬೇಕೆಂದು ಮನವಿ ಮಾಡಿದ್ದರು.
ದಿಲ್ಲಿಯ ಜಹಾಂಗೀರಪುರಿಯಲ್ಲಿ ನಡೆದ ಧ್ವಂಸ ಪ್ರಕ್ರಿಯೆಯತ್ತ ನ್ಯಾಯಾಲಯದ ಗಮನ ಸೆಳೆದ ದುಶ್ಯಂತ್ ದವೆ, ಕೆಲವು ಪ್ರಕರಣಗಳಲ್ಲಿ ಬಾಡಿಗೆಗೆ ನೀಡಿದ ಆಸ್ತಿಯನ್ನು ಕೆಡವಲಾಗಿದೆ. ಮಾಲೀಕರ ಮಗ ಅಥವಾ ಬಾಡಿಗೆದಾರರು ಭಾಗಿಯಾಗಿರುವ ಕಾರಣ ಅವರು 50-60 ವರ್ಷ ಹಳೆಯ ಮನೆಗಳನ್ನು ಕೆಡವಿದ್ದಾರೆ ಎಂದು ಹೇಳಿದ್ದರು.
ಆರೋಪಿ ಕ್ರಿಮಿನಲ್ ಅಪರಾಧದಲ್ಲಿ ಭಾಗಿಯಾಗಿದ್ದಾನೆ ಎಂಬ ಕಾರಣಕ್ಕೆ ಯಾವುದೇ ಸ್ಥಿರ ಆಸ್ತಿಯನ್ನು ನೆಲಸಮ ಮಾಡಲಾಗುವುದಿಲ್ಲ. ಕಟ್ಟಡ ನಿರ್ಮಾಣವು ಕಾನೂನುಬಾಹಿರವಾಗಿದ್ದರೆ ಮಾತ್ರ ಅದನ್ನು ತೆರವುಗೊಳಿಸಲು ಸಾಧ್ಯ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಬಿಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆವಿ ವಿಶ್ವನಾಥನ್ ಅವರ ಪೀಠಕ್ಕೆ ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Supreme Court: ಬುಲ್ಡೋಜರ್ ನೀತಿಗೆ ಸುಪ್ರೀಂ ಕೋಕ್; ಅಪರಾಧಿಯ ಮನೆ ಕೆಡವುದು ಸರಿಯಲ್ಲ ಎಂದು ತರಾಟೆ