Thursday, 19th September 2024

Supreme Court: ಟೆಲಿಕಾಂ ಕಂಪನಿಗಳಿಗೆ ಹಿನ್ನಡೆ; ಎಜಿಆರ್‌ ಮರು ಲೆಕ್ಕಾಚಾರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌

Supreme Court

ನವದೆಹಲಿ: ಸರ್ಕಾರಕ್ಕೆ ಪಾವತಿಸುವ ಎಜಿಆರ್‌ (ಅಡ್ಜಸ್ಟೆಡ್‌ ಗ್ರಾಸ್‌ ರೆವೆನ್ಯೂ – ಸರಿ ಹೊಂದಿಸಲಾದ ಆದಾಯ Adjusted Gross Revenues) ಮೊತ್ತವನ್ನು ಮರು ಲೆಕ್ಕಾಚಾರ ಮಾಡಬೇಕು ಎನ್ನುವ ಟೆಲಿಕಾಂ ಕಂಪನಿಗಳ ಮನವಿಯನ್ನು ಸುಪ್ರೀಂ ಕೋರ್ಟ್ (Supreme Court) ಬುಧವಾರ ತಿರಸ್ಕರಿಸಿದೆ. ಇದರಿಂದಾಗಿ ಎಲ್ಲ ಸಂಸ್ಥೆಗಳ ಮೇಲೆ ಪರಿಣಾಮ ಬೀರುವ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಕಂಪನಿಗಳು ಕಳವಳ ವ್ಯಕ್ತಪಡಿಸಿವೆ.

ವೊಡಾಫೋನ್ ಇಂಡಿಯಾ, ಭಾರ್ತಿ ಏರ್‌ಟೆಲ್‌ ಮತ್ತು ಇತರ ಕಂಪನಿಗಳು ಎಜಿಆರ್‌ಗೆ ಸಂಬಂಧಿಸಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಕ್ಯುರೇಟಿವ್ ಅರ್ಜಿಯನ್ನು ಸಲ್ಲಿಸಿವೆ. ಎಜಿಆರ್‌ ಎಂದರೆ ಖಾಸಗಿ ಟೆಲಿಕಾಂ ಕಂಪನಿಗಳು ಲೈಸನ್ಸ್‌ ಮತ್ತು ಸ್ಪೆಕ್ಟ್ರಮ್‌ ಬಳಕೆಯ ಸಲುವಾಗಿ ದೂರಸಂಪರ್ಕ ಇಲಾಖೆಗೆ ಸಲ್ಲಿಸಬೇಕಾಗಿರುವ ಶುಲ್ಕ. ಎಜಿಆರ್‌ ಪದ್ಧತಿಯ ಅಡಿಯಲ್ಲಿ ಇದನ್ನು ನಿಗದಿಪಡಿಸಲಾಗುತ್ತದೆ.

ಕೇಂದ್ರ ಸರ್ಕಾರಕ್ಕೆ ಪ್ರತಿ ವರ್ಷ ಶೇ. 10ರ ಪಾವತಿಯಂತೆ ಬಾಕಿ ಉಳಿದಿರುವ ಎಜಿಆರ್ ಮೊತ್ತವನ್ನು ಸಂಪೂರ್ಣವಾಗಿ ಪಾವತಿ ಮಾಡಲು ಸುಪ್ರೀಂ ಕೋರ್ಟ್ 2020ರ ಸೆಪ್ಟೆಂಬರ್‌ನಲ್ಲಿ 10 ವರ್ಷಗಳ ಅವಧಿಯನ್ನು ದೂರಸಂಪರ್ಕ ಸಂಸ್ಥೆಗಳಿಗೆ ನೀಡಿತ್ತು.

ದೂರಸಂಪರ್ಕ ಇಲಾಖೆ ಲೆಕ್ಕಾಚಾರ ಮಾಡಿದ ಎಜಿಆರ್ ಬಾಕಿ ಮೊತ್ತ 1 ಲಕ್ಷ ಕೋಟಿ ರೂ.ಗಿಂತ ಹೆಚ್ಚು. ಏರ್‌ಟೆಲ್‌ 43,980 ಕೋಟಿ ರೂ., ವೊಡಾಫೋನ್ 58,254 ಕೋಟಿ ರೂ. ಪಾವತಿಸಬೇಕಾಗಿದೆ. ಆದರೆ ಕಂಪನಿಗಳ ಲೆಕ್ಕಾಚಾರದ ಪ್ರಕಾರ, ಏರ್‌ಟೆಲ್‌ ಕೇವಲ 13,004 ಕೋಟಿ ರೂ.ಗಳನ್ನು ಮತ್ತು ವೊಡಾಫೋನ್ ಕೇವಲ 21,533 ಕೋಟಿ ರೂ.ಗಳನ್ನು ಬಾಕಿ ಉಳಿಸಿಕೊಂಡಿದೆ. ಹೀಗಾಗಿ ಮರು ಲೆಕ್ಕಾಚಾರ ಮಾಡುವಂತೆ ಕಂಪನಿಗಳು ಕೋರ್ಟ್‌ ಮೆಟ್ಟಿಲೇರಿವೆ.

ಟಾಟಾ ಟೆಲಿಸರ್ವೀಸಸ್ ಸೇರಿದಂತೆ ಇತರ ಕಂಪನಿಗಳು ಪಾವತಿಸಬೇಕಾದ ಬಾಕಿ ಮೊತ್ತದ ಬಗ್ಗೆ ತಮ್ಮದೇ ಲೆಕ್ಕಾಚಾರ ನಡೆಸಿವೆ. ʼಅನಿಯಂತ್ರಿತ ದಂಡʼದ ಬಗ್ಗೆ ಟೆಲಿಕಾಂ ಸಂಸ್ಥೆಗಳು ದೂರು ನೀಡಿವೆ. ಡಿಒಟಿ (Department of Telecommunications) ಎಜಿಆರ್‌ನ ಶೇಕಡಾವಾರು ಸರ್ಕಾರದ ಪಾಲನ್ನು ಲೆಕ್ಕ ಹಾಕುತ್ತದೆ. ಆದರೆ ಎಜಿಆರ್ ಅನ್ನು ನಿಖರವಾಗಿ ಹೇಗೆ ಲೆಕ್ಕ ಹಾಕಲಾಗುತ್ತದೆ ಎನ್ನುವುದೇ ಕಂಪನಿಗಳು ಎದುರಿಸುವ ಬಹುದೊಡ್ಡ ಪ್ರಶ್ನೆ. ಈ ವಿಚಾರಕ್ಕೆ ಸಂಬಂಧಿಸಿ ಸುಮಾರು 2 ದಶಕಗಳಿಂದ ವಿವಾದ ನಡೆಸಯುತ್ತಿದೆ.

2019ರಲ್ಲಿ ಸುಪ್ರೀಂ ಕೋರ್ಟ್ ಸರ್ಕಾರದ ಪರವಾಗಿ ತೀರ್ಪು ನೀಡಿತ್ತು ಮತ್ತು ಟೆಲಿಕಾಂ ಸಂಸ್ಥೆಗಳಿಗೆ 180 ದಿನಗಳಲ್ಲಿ 92,000 ಕೋಟಿ ರೂ.ಗಳನ್ನು ಪಾವತಿಸುವಂತೆ ಆದೇಶಿಸಿತ್ತು. ಆ ಆದೇಶವು ಟೆಲಿಕಾಂ ಉದ್ಯಮಕ್ಕೆ ತೀವ್ರ ಹೊಡೆತ ನೀಡಿತ್ತು. ಟೆಲಿಕಾಂ ಕಂಪನಿಗಳಿಗೆ ಟೆಲಿಕಾಂ ಮತ್ತು ಟೆಲಿಕಾಂಯೇತರ ಸೇವೆಗಳಲ್ಲಿ ಸಿಗುವ ಆದಾಯವನ್ನು ಎಜಿಆರ್‌ ಲೆಕ್ಕಾಚಾರದ ವ್ಯಾಪ್ತಿಗೆ ಸೇರಿಸಬೇಕು ಎನ್ನುವುದು ದೂರಸಂಪರ್ಕ ಇಲಾಖೆಯ ವಾದ. ಆದರೆ ಮೊಬೈಲ್‌ ಕಂಪನಿಗಳು ಟೆಲಿಕಾಂಯೇತರ ಆದಾಯವನ್ನು ಎಜಿಆರ್‌ ಶುಲ್ಕದ ವ್ಯಾಪ್ತಿಗೆ ಸೇರಿಸಲು ಒಪ್ಪಿರಲಿಲ್ಲ. ಟೆಲಿಕಾಂ ಸೇವೆಗಳಿಂದ ಲಭಿಸುವ ಆದಾಯವನ್ನು ಮಾತ್ರ ಎಜಿಆರ್‌ಗೆ ಪರಿಗಣಿಸಬೇಕು ಎಂಬುದು ಮೊಬೈಲ್‌ ಕಂಪನಿಗಳು ವಾದಿಸಿದ್ದವು. ಅಂತಿಮವಾಗಿ ಸುಪ್ರಿಂಕೋರ್ಟ್‌ ದೂರಸಂಪರ್ಕ ಇಲಾಖೆಯ ಪರ ತೀರ್ಪು ನೀಡಿತ್ತು.

ಈ ಸುದ್ದಿಯನ್ನೂ ಓದಿ: iOS 18 features: ಐಒಎಸ್‌ 18 ಹೊಸ ಫೀಚರ್‌ಗಳು ಇಲ್ಲಿವೆ ನೋಡಿ! ಐಪೋನ್‌ ಬಳಕೆದಾರರಿಗೆ ಹಬ್ಬ!