Wednesday, 6th November 2024

Supreme Court: ಅನಾರೋಗ್ಯಕ್ಕೀಡಾದ ಆರೋಪಿಗೆ ಜಾಮೀನು ನೀಡಬಹುದು ಎಂದ ಸುಪ್ರೀಂ; ದರ್ಶನ್‌ಗೆ ವರ?

Supreme Court

ನವದೆಹಲಿ: ನ್ಯಾಯಾಂಗ ಬಂಧನದಲ್ಲಿರುವ (Judicial Custody) ವ್ಯಕ್ತಿ ಅನಾರೋಗ್ಯಕ್ಕೀಡಾಗಿದ್ದರೆ ಅಂಥವರಿಗೆ ಜಾಮೀನು (Bail) ನೀಡಬಹುದು ಎಂದು ಸುಪ್ರೀಂ ಕೋರ್ಟ್ (Supreme court) ಅಭಿಪ್ರಾಯಪಟ್ಟಿದೆ. ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ಈ ತೀರ್ಪು ನೀಡಲಾಗಿದೆ.

ಈ ತೀರ್ಪು ಉಲ್ಲೇಖಿಸಿ ನಟ ದರ್ಶನ್‌ಗೆ (Actor Darshan) ಜಾಮೀನು ಮಂಜೂರು ಮಾಡಿಸಿಕೊಳ್ಳಲು ಸಾಧ್ಯವಿದೆ ಎಂದು ಕೆಲವು ವಕೀಲರು ಅಭಿಪ್ರಾಯಪಟ್ಟಿದ್ದಾರೆ. ನಿನ್ನೆ ದರ್ಶನ್‌ ಹಾಗೂ ಪವಿತ್ರಾ ಗೌಡರ ಜಾಮೀನು ಅರ್ಜಿ ತೀರ್ಪು ಹೊರಬಿದ್ದಿದ್ದು, ಇಬ್ಬರಿಗೂ ಜಾಮೀನು ದೊರೆತಿಲ್ಲ. ಆರೋಪಿಗಳ ಪರ ವಕೀಲ ಸಿ.ವಿ ನಾಗೇಶ್‌ ಪ್ರಬಲ ವಾದ ಮಂಡಿಸಿದ್ದರೂ ಫಲಕಾರಿಯಾಗಿಲ್ಲ. ಇದೀಗ ಈ ತೀರ್ಪಿನ ಹಿನ್ನೆಲೆಯಲ್ಲಿ ಜಾಮೀನು ಕೇಳಬಹುದು ಎನ್ನಲಾಗಿದೆ. ಯಾಕೆಂದರೆ ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ವೈದ್ಯರು ಶಿಫಾರಸು ಮಾಡಿದ್ದರು.

ಏನಿದು ಪ್ರಕರಣ?

ಹಣದ ಅಕ್ರಮ ವರ್ಗಾವಣೆ ತಡೆ ಕಾಯ್ದೆಯು (ಪಿಎಂಎಲ್ ಎ) ಬಹಳ ಕಠಿಣವಾಗಿದ್ದರೂ ಆರೋಪಿ ಅನಾರೋಗ್ಯಕ್ಕೀಡಾದಾಗ ಆತನಿಗೆ ಈ ಕಾಯ್ದೆಯ ಅಡಿಯಲ್ಲಿ ಜಾಮೀನು ನೀಡಬಹುದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಸೇವಾ ವಿಕಾಸ ಸಹಕಾರ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅಮರ್ ಸಾಧುರಾಮ್ ಮೂಲಚಂದಾನಿ ಅವರಿಗೆ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರು ಇರುವ ತ್ರಿಸದಸ್ಯ ಪೀಠ ವೈದ್ಯಕೀಯ ಕಾರಣಕ್ಕಾಗಿ ಜಾಮೀನು ಮಂಜೂರು ಮಾಡಿದೆ.

ಅಮರ್ 429 ಕೋಟಿ ಮೊತ್ತದ ಹಣದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಅವರನ್ನು 2023 ರ ಜುಲೈ 1 ರಂದು ಬಂಧಿಸಲಾಗಿತ್ತು. ಆರೋಪಿ ವಿರುದ್ಧ ನಾಲ್ಕು ಎಫ್ ಐ ಆರ್ ಗಳು ಇವೆ. ಹಿರಿಯ ವಕೀಲ ಎ.ಎಸ್ ನಾಡಕರ್ಣಿ ಅವರು ಪೀಠದ ಗಮನಕ್ಕೆ ತಂದರು. ಅಮರ್ ಅವರು ಒಂದುವರ್ಷಕ್ಕೂ ಹೆಚ್ಚಿನ ಅವಧಿಯಿಂದ ಜೈಲಿನಲ್ಲಿದ್ದಾರೆ ಎಂಬುದನ್ನು ಪೀಠವು ದಾಖಲಿಸಿಕೊಂಡಿತು.

ಅಮರ್ ಅವರು ವೈದ್ಯಕೀಯ ಕಾರಣಕ್ಕಾಗಿ ತಮಗೆ ಜಾಮೀನು ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ಆಗಸ್ಟ್ ನಲ್ಲಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಮರ್ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇದೀಗ ಸುಪ್ರೀಂ ಕೋರ್ಟ್, ಆರೋಪಿ ಅನಾರೋಗ್ಯದಲ್ಲಿದ್ದರೆ ಜಾಮೀನು ನೀಡಬಹುದು ಎಂದು ತಿಳಿಸಿದೆ.

ಇದನ್ನೂ ಓದಿ: Actor Darshan: ದರ್ಶನ್‌, ಪವಿತ್ರಾ ಗೌಡ ಜಾಮೀನು ಅರ್ಜಿ ವಜಾಗೊಳಿಸಿದ ಕೋರ್ಟ್