ನವದೆಹಲಿ: ಯಾವುದೇ ಒಬ್ಬ ವ್ಯಕ್ತಿಯ ವಿಚಾರಣೆ ನಡೆಸದೆ ಅಥವಾ ನ್ಯಾಯಾಲಯದ ಸೂಚನೆ ಇಲ್ಲದೆಯೇ ಬಂಧನದ ಅವಧಿ ವಿಸ್ತರಿಸುವುದು ಅಕ್ಷಮ್ಯ. ಇದು ಆತನ ವೈಯಕ್ತಿಕ ಸ್ವಾತಂತ್ರ್ಯದ ಹರಣವಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.p
ತನ್ನ ಅಭಿಪ್ರಾಯ ಆಲಿಸದೇ ಎರಡು ಬಾರಿ ಬಂಧನದ ಅವಧಿ ವಿಸ್ತರಿಸಿದ್ದ ಪೊಲೀಸ್ ಅಧಿಕಾರಿಗಳ ಕ್ರಮ ಪ್ರಶ್ನಿಸಿ ಪ್ರಕಾಶ್ ಚಂದ್ರ ಯಾದವ್ ಅಲಿಯಾಸ್ ಮುಂಗೇರಿ ಯಾದವ್ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠವು ಈ ಆದೇಶ ಹೊರಡಿಸಿದೆ.
ಜಾರ್ಖಂಡ್ನ ಅಪರಾಧ ನಿಯಂತ್ರಣ ಕಾಯ್ದೆಯಡಿ ‘ಸಮಾಜ ಘಾತುಕ ವ್ಯಕ್ತಿ’ ಎಂಬ ಆರೋಪದ ಮೇಲೆ ಯಾದವ್ ಅವರನ್ನು ಬಂಧಿಸಲಾಗಿತ್ತು.
ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ಸುಧಾಂಶು ಧೂಲಿಯಾ ಅವರಿದ್ದ ಪೀಠವು, ‘ಸಲಹಾ ಮಂಡಳಿ ಮುಂದೆ ಹಾಜರುಪಡಿಸದೆ ಯಾವುದೇ ವ್ಯಕ್ತಿಯ ಬಂಧನದ ಅವಧಿಯನ್ನು ವಿಸ್ತರಿಸುವಂತಿಲ್ಲ. ಜೊತೆಗೆ, ಮೂರು ತಿಂಗಳಿಗೂ ಹೆಚ್ಚು ಕಾಲ ಬಂಧನದಲ್ಲಿ ಇಡುವಂತಿಲ್ಲ. ಇದು ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ರಚಿಸಿರುವ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಲಿದೆ’ ಎಂದು ಹೇಳಿದೆ.