ಬ್ಯಾಲಟ್ ಪೇಪರ್ ಇದ್ದಾಗ ಏನಾಯಿತು ಎಂದು ನಮಗೆಲ್ಲಾ ಗೊತ್ತಿದೆ. ನಿಮಗೆ ಅದು ಮರೆತುಹೋಗಿರಬಹುದು, ಆದರೆ, ನಾವು ಮರೆತಿಲ್ಲ,’ ಎಂದು ನ್ಯಾಯಪೀಠದಲ್ಲಿದ್ದ ನ್ಯಾ| ಸಂಜೀವ್ ಖನ್ನ ಹೇಳಿದರು.
ಹೆಚ್ಚಿನ ಯೂರೋಪಿಯನ್ ದೇಶಗಳು ಇವಿಎಂ ಬದಲು ಬ್ಯಾಲಟ್ ಪೇಪರ್ ಮತದಾನ ವಿಧಾನವನ್ನು ಮರಳಿ ಆಯ್ಕೆ ಮಾಡಿಕೊಂಡಿರುವ ಸಂಗತಿಯನ್ನು ಉಲ್ಲೇಖಿಸಿ ಅರ್ಜಿದಾರರ ಪರ ವಕೀಲ ಪ್ರಶಾಂತ್ ಭೂಷಣ್ ಮುಂದಿಟ್ಟಿದ್ದ ವಾದಕ್ಕೆ ನ್ಯಾಯಮೂರ್ತಿಗಳು ಈ ಉತ್ತರ ನೀಡಿದರು.
‘ನಾವು ಪೇಪರ್ ಬ್ಯಾಲಟ್ಗೆ ಮರಳಬಹುದು. ವಿವಿಪ್ಯಾಟ್ ಸ್ಲಿಪ್ ಅನ್ನು ಮತದಾರರಿಗೆ ನೀಡುವುದು ಮತ್ತೊಂದು ಆಯ್ಕೆ. ಮೆಷಿನ್ನಿಂದ ಹೊರಬರುವ ಪೇಪರ್ ಸ್ಲಿಪ್ ಅನ್ನು ಮತದಾರರು ಬ್ಯಾಲಟ್ ಬಾಕ್ಸ್ಗೆ ಹಾಕಬಹುದು,’ ಎಂದು ಪ್ರಶಾಂತ್ ಭೂಷಣ್ ಅವರು ಜರ್ಮನಿಯ ಉದಾಹರಣೆ ನೀಡಿದರು.
’60 ಕೋಟಿ ವಿವಿಪ್ಯಾಟ್ ಸ್ಲಿಪ್ಗಳನ್ನು ಎಣಿಸಬೇಕಾಗುತ್ತದೆ, ಅಲ್ಲವೇ? ಮನುಷ್ಯನೇ ಎಣಿಕೆ ಮಾಡುತ್ತಾನಾದ್ದರಿಂದ ಪಕ್ಷಪಾತಿ ತನ, ಮಾನವ ಸಹಜ ದೌರ್ಬಲ್ಯ ಬರಬಹುದು. ಮನುಷ್ಯನ ಹಸ್ತಕ್ಷೇಪ ಇಲ್ಲದೆ ಯಂತ್ರಗಳು ನಿಖರ ಫಲಿತಾಂಶ ಕೊಡುತ್ತವೆ. ಮೆಷೀನ್ ಅಥವಾ ಸಾಫ್ಟ್ವೇರ್ನಲ್ಲಿ ಮನುಷ್ಯನ ಹಸ್ತಕ್ಷೇಪ ಆದಾಗ ಮಾತ್ರ ಸಮಸ್ಯೆ ಉದ್ಭವ ಆಗುತ್ತದೆ. ಇದನ್ನು ತಪ್ಪಿಸಲು ನಿಮ್ಮ ಬಳಿ ಸಲಹೆ ಇದ್ದರೆ ಕೊಡಿ,’ ಎಂದು ನ್ಯಾ| ಸಂಜೀವ್ ಖನ್ನಾ ಹೇಳಿದರು.
ಎಲೆಕ್ಟ್ರಾನಿಕ್ ವೋಟಿಂಗ್ ಮೆಷೀನ್ ಬಂದ ಬಳಿಕ ಮತ ಎಣಿಕೆ ಪ್ರಕ್ರಿಯೆ ಸುಗಮಗೊಂಡಿದೆ. ಆದರೆ, ತಂತ್ರಜ್ಞಾನವನ್ನು ಸರ್ಕಾರ ತನ್ನ ಅನುಕೂಲಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎಂದು ಕಳೆದ 10 ವರ್ಷಗಳಿಂದಲೂ ವಿಪಕ್ಷಗಳು ಆರೋಪಿಸುತ್ತಿವೆ. ಇವಿಎಂ ಬದಲು ಹಳೆಯ ಬ್ಯಾಲಟ್ ಬಾಕ್ಸ್ ಮತದಾನ ಪದ್ಧತಿಯನ್ನೇ ವಾಪಸ್ ತರಬೇಕೆಂಬ ಒತ್ತಾಯಗಳು ಇವೆ.