ಪಟನಾ/ನವದೆಹಲಿ: ಬಿಹಾರದಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿಗಳ ಮೀಸಲಾತಿ ಪ್ರಮಾಣವನ್ನು ಶೇ.50ರಿಂದ ಶೇ.65ಕ್ಕೆ ಏರಿಕೆ ಮಾಡುವ ಮುಖ್ಯ ಮಂತ್ರಿ ನಿತೀಶ್ ಕುಮಾರ್ ಅವರ ಕನಸಿಗೆ ಸುಪ್ರೀಂ ಕೋರ್ಟ್ ತಣ್ಣೀರೆರಚಿದೆ. ರಾಜ್ಯ ಸರ್ಕಾರದ ಮೀಸಲಾತಿ ಹೆಚ್ಚಳ ನಿರ್ಧಾರಕ್ಕೆ ಪಟನಾ ಹೈಕೋರ್ಟ್ ಕೆಲ ದಿನಗಳ ಹಿಂದೆ ನೀಡಿದ್ದ ತಡೆಯಾಜ್ಞೆಯ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ.
ಇದರೊಂದಿಗೆ ನಿತೀಶ್ ಕುಮಾರ್ ಅವರಿಗೆ ಭಾರಿ ಮುಖಭಂಗವಾಗಿದೆ.
ಪಟನಾ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಹೈಕೋರ್ಟ್ ಆದೇಶ ಪ್ರಶ್ನಿಸಿ ಬಿಹಾರ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ತೀರ್ಮಾನಿಸಿದೆ. ಮೀಸಲಾತಿ ಹೆಚ್ಚಿಸುವ ರಾಜ್ಯ ಸರ್ಕಾರದ ತೀರ್ಮಾನ ಪ್ರಶ್ನಿಸಿ ಸಲ್ಲಿಕೆ ಯಾಗಿದ್ದ ಅರ್ಜಿಗಳನ್ನು ಜೂನ್ 20ರಂದು ವಿಚಾರಣೆ ನಡೆಸಿದ್ದ ಪಟನಾ ಹೈಕೋರ್ಟ್, ‘ಮೀಸಲಾತಿ ಹೆಚ್ಚಿಸುವ ತೀರ್ಮಾನವು ಕಾನೂನಿನಲ್ಲಿ ಕೆಟ್ಟ ಪದ್ಧತಿಯಾಗಿದ್ದು, ಸಮಾನತೆ ಷರತ್ತಿನ ವಿರುದ್ಧವಾಗಿದೆ’ ಎಂದು ಹೇಳಿ, ಮೀಸಲಾತಿಗೆ ತಡೆಯಾಜ್ಞೆ ನೀಡಿತ್ತು.
ಬಿಹಾರದಲ್ಲಿರುವ ಒಟ್ಟು 13.07 ಕೋಟಿ ಜನಸಂಖ್ಯೆಯಲ್ಲಿ ಶೇ.63ರಷ್ಟು ಜನ ಇತರೆ ಹಿಂದುಳಿದ ವರ್ಗಗಳು ಹಾಗೂ ಅತ್ಯಂತ ಹಿಂದುಳಿದ ವರ್ಗಗಳ ಉಪ ಪಂಗಡಗಳ ಜನರೇ ಇರುವ ಕಾರಣ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ತೀರ್ಮಾನಿಸಲಾಗಿತ್ತು. ಆದಾಗ್ಯೂ, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಯಾವುದೇ ರಾಜ್ಯದ ಮೀಸಲಾತಿ ಪ್ರಮಾಣವು ಶೇ.50ಕ್ಕಿಂತ ಜಾಸ್ತಿ ಇರಬಾರದು. ಹಾಗಾಗಿ, ನ್ಯಾಯಾಲಯವು ಪಟನಾ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ ಎಂದು ತಿಳಿದುಬಂದಿದೆ.
ಬಿಹಾರದಲ್ಲಿ ನಡೆಸಿದ ಜಾತಿಗಣತಿ ವರದಿ ಪ್ರಕಾರ, ಅತ್ಯಂತ ಹಿಂದುಳಿದ ಜಾತಿಯ ಜನ 36.01%, ಹಿಂದುಳಿದ ಸಮುದಾಯ 27.12% ಮತ್ತು ಸಾಮಾನ್ಯ ವರ್ಗ 15.52% ಇದ್ದಾರೆ. ಪರಿಶಿಷ್ಟ ಜಾತಿಯವರು 19.65% ಮತ್ತು ಪರಿಶಿಷ್ಟ ಪಂಗಡದವರು 1.68% ಇದ್ದಾರೆ.
OBCಗಳಲ್ಲಿ ಯಾದವರು 14.26%ರಷ್ಟಿದ್ದರೆ, ಕುಶ್ವಾಹಾ ಮತ್ತು ಕುರ್ಮಿಗಳು ಕ್ರಮವಾಗಿ 4.27% ಮತ್ತು 2.87% ಜನಸಂಖ್ಯೆಯನ್ನು ಹೊಂದಿದ್ದಾರೆ. ಭೂಮಿಹಾರ್‌ಗಳು 2.86 ಪ್ರತಿಶತ, ಬ್ರಾಹ್ಮಣರು 3.66 ಪ್ರತಿಶತ, ಮುಸಾಹರ್‌ಗಳು 3 ಪ್ರತಿಶತ ಇದ್ದಾರೆ.