ಮುಂಬೈನಲ್ಲಿ ತಡರಾತ್ರಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸುಪ್ರಿಯಾ ಸುಳೆ, ತಮ್ಮ ತಂದೆ ಮತ್ತು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸ್ಥಾನಮಾನ ಮತ್ತಷ್ಟು ಹೆಚ್ಚಾಗಲಿದೆ. ಅಜಿತ್ ಪವಾರ್ ವಿಭಿನ್ನ ದೃಷ್ಟಿಕೋನಗಳನ್ನು ಹೊಂದಿರ ಬಹುದು, ಹಾಗೆಂದು ಅಣ್ಣನ ಜೊತೆ ಜಗಳವಾಡಲು ಹೋಗುವುದಿಲ್ಲ. ಮೊದಲಿನಂತೆ ಸಹೋದರಿ ಯಾಗಿ ಅವರ ಮೇಲೆ ಪ್ರೀತಿ, ವಿಶ್ವಾಸ ಹೊಂದಿದ್ದೇನೆ ಎಂದರು.
ಸುಪ್ರಿಯಾ ಸುಳೆ ಅವರು ಕಳೆದ ತಿಂಗಳು ಪಕ್ಷದ ಕಾರ್ಯಾಧ್ಯಕ್ಷರಾಗಿ ಬಡ್ತಿ ಹೊಂದಿದ್ದು ಅಜಿತ್ ಪವಾರ್ ಅವರ ಬಂಡಾಯ ವನ್ನು ಪ್ರಚೋದಿಸಿತು ಎಂದು ಹೇಳಲಾಗುತ್ತಿದ್ದು, ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ದಲ್ಲಿ ಅಜಿತ್ ಪವಾರ್ ಸೇರ್ಪಡೆ ಎನ್ ಸಿಪಿಯಲ್ಲಿ ಮತ್ತು ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ.
ಮುಂಬೈನಲ್ಲಿರುವ ಅಜಿತ್ ಪವಾರ್ ಅವರ ಅಧಿಕೃತ ನಿವಾಸ ‘ದೇವಗಿರಿ’ಯಲ್ಲಿ ನಡೆದ ಸಭೆಯಲ್ಲಿ ಏನು ನಡೆಯಿತು ಎಂಬ ಪ್ರಶ್ನೆಗೆ, ಸುಳೆ ಅವರು ತಮ್ಮ ಮತ್ತು ಸಹೋದರನ ನಡುವೆ ಏನು ಚರ್ಚಿಸಲಾಗಿದೆ ಎಂಬುದು ನಮ್ಮ ಮಧ್ಯೆ ಮಾತ್ರ ಇರುತ್ತದೆ ಎಂದರು. ಪಕ್ಷ ಸಂಘಟನೆಯನ್ನು ಬಲಪಡಿಸಲು ಮತ್ತು ರಾಜ್ಯ ಮತ್ತು ದೇಶದ ಕಲ್ಯಾಣಕ್ಕಾಗಿ ನವ ಚೈತನ್ಯದಿಂದ ಕೆಲಸ ಮಾಡಬೇಕಾಗುತ್ತದೆ ಎಂದು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ಹೇಳಿದ್ದಾರೆ.