ಸೂರತ್: ವಿಶ್ವದ ಅತಿದೊಡ್ಡ ಅತ್ಯಾಧುನಿಕ ಕೇಂದ್ರ ಸೂರತ್ ಡೈಮಂಡ್ ಬೋರ್ಸ್ ಕಟ್ಟಡವನ್ನು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಉದ್ಘಾಟಿಸಿ ದರು.
ಈ ಕಟ್ಟಡವು 67 ಲಕ್ಷ ಚದರ್ ಅಡಿಗಿಂತ ಹೆಚ್ಚು ವಿಸ್ತೀರ್ಣದಲ್ಲಿ ತಲೆ ಎತ್ತಿದ್ದು, ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣ ಎಂಬ ಹೆಗ್ಗಳಿಕೆ ಪಡೆದಿದೆ.
ಸೂರತ್ ಡೈಮಂಡ್ ಬೋರ್ಸ್ ಉದ್ಘಾಟನೆಗೂ ಮುನ್ನ 353 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸೂರತ್ ವಿಮಾನ ನಿಲ್ದಾಣದ ನೂತನ ಟರ್ಮಿನಲ್ ಕಟ್ಟಡವನ್ನೂ ಪಿಎಂ ಮೋದಿ ಉದ್ಘಾಟಿಸಿದರು. ಬಳಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂದು ಸೂರತ್‌ನ ಜನರು ಮತ್ತು ಇಲ್ಲಿನ ವ್ಯಾಪಾರಿಗಳು ಮತ್ತು ಉದ್ಯಮಿಗಳಿಗೆ ಇನ್ನೂ ಎರಡು ಉಡುಗೊರೆಗಳು ದೊರೆತಿವೆ. ಸೂರತ್ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ ಮತ್ತು ಎರಡನೇ ದೊಡ್ಡ ವಿಷಯವೆಂದರೆ ಈಗ ಸೂರತ್ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸ್ಥಾನಮಾನ ಪಡೆದುಕೊಂಡಿದೆ. ಈ ಅದ್ಭುತ ಟರ್ಮಿನಲ್ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ನಾನು ಸೂರತ್‌ನ ಜನರು ಮತ್ತು ಗುಜರಾತ್‌ನ ಜನರನ್ನು ಅಭಿನಂದಿಸುತ್ತೇನೆ ಎಂದು ತಿಳಿಸಿದರು.
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್ ಫೆಬ್ರವರಿ 2015ರಲ್ಲಿ ಎಸ್‌ಡಿಬಿ ಮತ್ತು ಡ್ರೀಮ್ ಸಿಟಿ ಯೋಜನೆಯ ಅಡಿಗಲ್ಲು ನೆರವೇರಿಸಿ ದ್ದರು. ಡ್ರೀಮ್ ಸಿಟಿಯೊಳಗೆ 35.54 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಬೃಹತ್ ರಚನೆಯು 15 ಮಹಡಿಗಳ ಒಂಬತ್ತು ಟವರ್‌ಗಳನ್ನು ಹೊಂದಿದ್ದು, 300 ಚದರ್ ಅಡಿಯಿಂದ 1 ಲಕ್ಷ ಚದರ್ ಅಡಿವರೆಗಿನ ಕಚೇರಿ ಸ್ಥಳಗಳನ್ನು ಹೊಂದಿದೆ.