ತ್ರಿಶ್ಶೂರ್: ಪ್ರಮಾಣ ವಚನ ಮರುದಿನವೇ ತ್ರಿಶ್ಶೂರ್ ನ ಬಿಜೆಪಿ ಸಂಸದ, ನಟ ಸುರೇಶ್ ಗೋಪಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿಗಳಿಗೆ ಸುರೇಶ್ ಗೋಪಿ ತೆರೆ ಎಳೆದಿದ್ದಾರೆ.
ತಾನು ರಾಜೀನಾಮೆ ನೀಡುತ್ತಿರುವುದಾಗಿ ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ‘ಕೆಲವು ಮಾಧ್ಯಮ ಗಳಲ್ಲಿ ನಾನು ರಾಜೀನಾಮೆ ನೀಡಲಿರುವುದಾಗಿ ವರದಿಯಾಗುತ್ತಿದೆ. ಮೋದಿ ಸರ್ಕಾರದಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿರುವುದು ಮತ್ತು ಕೇರಳವನ್ನು ಪ್ರತಿನಿಧಿಸುತ್ತಿರುವುದು ನನಗೆ ಹೆಮ್ಮೆಯ ವಿಷಯ. ಮೋದಿಜಿಯವರ ಮಾರ್ಗದರ್ಶನದಲ್ಲಿ ನಾವು ಕೇರಳದ ಅಭಿವೃದ್ಧಿಗಾಗಿ ದುಡಿಯಲು ನಾನು ಬದ್ಧನಾಗಿದ್ದೇನೆ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಮಾಣ ವಚನ ಸ್ವೀಕಾರದ ಮರುದಿನವೇ ಸುರೇಶ್ ಗೋಪಿ ರಾಜೀನಾಮೆಗೆ ಮುಂದಾಗಿದಾರೆ ಎಂದು ಸುದ್ದಿಯಾಗಿತ್ತು.
‘ನಾನು ನಮ್ಮ ನಾಯಕರ ಬಳಿ ನನಗೆ ಈ ಸಚಿವ ಸ್ಥಾನ ಬೇಡವೆಂದು ಹೇಳುತ್ತೇನೆ. ಯಾಕೆಂದರೆ ನಾನು ತ್ರಿಶ್ಶೂರ್ ಜನರ ಸಮಸ್ಯೆಗಳಿಗೆ ಕೇವಲ ಒಬ್ಬ ಸಂಸದನಾಗಿ ಕೆಲಸ ಮಾಡಬೇಕಿದೆ. ಅಲ್ಲದೆ, ನಾನು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದೆ. ಅವುಗಳನ್ನು ಮುಗಿಸಬೇಕಿದೆ. ಇವುಗಳ ನಡುವೆ ಸಚಿವ ಸ್ಥಾನದ ಜವಾಬ್ಧಾರಿ ನನಗೆ ಬೇಡ’ ಎಂದು ಸುರೇಶ್ ಗೋಪಿ ಹೇಳಿದ್ದಾರೆ ಎನ್ನಲಾಗಿತ್ತು.