Thursday, 12th December 2024

ಪಂಚಾಯತ್ ಕಚೇರಿ ಸ್ವಚ್ಛವಾಗಿಡುತ್ತಿದ್ದ ಸ್ವೀಪರ್‌, ಈಗ ಅಧ್ಯಕ್ಷೆ !

ತಿರುವನಂತಪುರಂ: ಇದಲ್ಲವೇ ಸಾಧನೆ. ಎಂಥವರನ್ನು ಆಶ್ಚರ್ಯಚಕಿತ ಹಾಗೂ ಹೆಮ್ಮೆಪಡುವಂಥ ಸಾಧನೆ.

ಕೊಲ್ಲಂ ಜಿಲ್ಲೆಯ ಪತ್ತನಪುರಂ ಬ್ಲಾಕ್ ಪಂಚಾಯತ್ ಕಚೇರಿಯನ್ನು ಗುಡಿಸಿ ಸ್ವಚ್ಛಗೊಳಿಸುತ್ತಿದ್ದ 46 ವರ್ಷದ ಎ.ಆನಂದವಳ್ಳಿ ಅದೇ ಕಚೇರಿಯಲ್ಲಿ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಇತ್ತೀಚೆಗೆ ನಡೆದ ಸ್ಥಳೀಯ ಪಂಚಾಯತ್ ಚುನಾವಣೆಯಲ್ಲಿ ದಲಿತ ಸಮುದಾಯದ ಆನಂದವಳ್ಳಿ ಸಿಪಿಎಂ ಪಕ್ಷದಿಂದ ಸ್ಪರ್ಧಿಸಿ ದ್ದರು. “ನನ್ನ ಪಕ್ಷ ಮಾತ್ರ ಇಂತಹ ಅವಕಾಶ ನೀಡಲು ಸಾಧ್ಯ. ನಾನು ಸದಾ ಋಣಿಯಾಗಿದ್ದೇನೆ,” ಎಂದು ಭಾವಪರವಶರಾದ ಆನಂದವಳ್ಳಿ ಅಧ್ಯಕ್ಷೆಯ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾ ಹೇಳಿದರು.

ಶಾಲೆಯನ್ನು ಅರ್ಧದಲ್ಲಿಯೇ ತೊರೆದಿರುವ ಆನಂದವಳ್ಳಿ ಅವರ ಕುಟುಂಬ ಮಾಕ್ರ್ಸಿಸ್ಟ್ ಪಕ್ಷದ ಬೆಂಬಲಿಗರು. ವೃತ್ತಿಯಲ್ಲಿ ಪೈಂಟರ್ ಆಗಿರುವ ಆಕೆಯ ಪತಿ ಕೂಡ ಸಿಪಿಎಂನ ಸಕ್ರಿಯ ಕಾರ್ಯಕರ್ತರು, 2011ರಿಂದ ಪಂಚಾಯತ್ ಕಚೇರಿಯಲ್ಲಿ ಅರೆ ಕಾಲಿಕ ಸ್ವೀಪರ್ ಆಗಿರುವ ಅವರಿಗೆ ಆರಂಭದಲ್ಲಿ ಮಾಸಿಕ 2,000 ರೂ. ವೇತನ ಪಡೆಯುತ್ತಿದ್ದರೆ ಈಗ 6,000 ರೂ. ವೇತನ ಪಡೆಯುತ್ತಿದ್ದಾರೆ. ಪಂಚಾಯತ್ ಅಧ್ಯಕ್ಷೆಯಾಗಿ ಆಯ್ಕೆಗೊಂಡ ನಂತರ ಅವರು ತಾತ್ಕಾಲಿಕ ಸ್ವೀಪರ್ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ತಳವೂರು ಡಿವಿಷನ್‍ನಿಂದ ಅವರು 654 ಮತಗಳನ್ನು ಪಡೆದು ಗೆದ್ದಿದ್ದಾರೆ.