ವೆಲ್ಲಿಂಗ್ಟನ್: ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ನಡುವಣ ನಡೆದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಪ್ರವಾಸಿ ಆಸೀಸ್ ತಂಡ 64 ರನ್ನುಗಳಿಂದ ಪರಾಭವಗೊಳಿಸಿತು.
ಇದಕ್ಕೂ ಮುನ್ನ ನ್ಯೂಜಿಲೆಂಡ್ ತಂಡ, ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಟಗಾರ ಮ್ಯಾಥ್ಯೂ ವೇಡ್ 5 ರನ್ ಗಳಿಸಿ ಟ್ರೆಂಟ್ ಬೌಲ್ಟ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಜೋಶ್ ಫಿಲಿಪ್ಪೆ 43 ರನ್ ಗಳಿಸಿದರು. ನಾಯಕ ಆರೋನ್ ಫಿಂಚ್ ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ ಜೊತೆಯಾಟವಾಡಿದರು.
ನಂತರ ಆರೋನ್ ಫಿಂಚ್ 69 ರನ್ ಗಳಿಸಿದ್ದು ಸೋಧಿ ಬೌಲಿಂಗ್‌ನಲ್ಲಿ ಔಟಾದರೆ, ಮ್ಯಾಕ್ಸ್ ವೆಲ್ ಕೇವಲ 31 ಎಸೆತಗಳಲ್ಲಿ 70ರನ್ ಗಳಿಸುವ ಮೂಲಕ ಟಿಮ್ ಸೌದಿ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಈ ಸ್ಪೋಟಕ ಇನಿಂಗ್ಸ್ ನಲ್ಲಿ 5 ಸಿಕ್ಸರ್ ಹಾಗೂ 8 ಬೌಂಡರಿ ಸಿಡಿಯಿತು. ಆಸ್ಟ್ರೇಲಿಯ ತಂಡ 4 ವಿಕೆಟ್ ನಷ್ಟಕ್ಕೆ 208 ರನ್ ಗಳ ಮೊತ್ತ ದಾಖಲಿಸಿತು.
ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ತಂಡ ಆರಂಭದಲ್ಲಿ ಟಿಮ್ ಸೈಫರ್ಟ್ 4 ರನ್ ಗಳಿಸಿ ರಿಲೆ ಮೆರೆಡಿತ್ ಬೌಲಿಂಗ್‌ನಲ್ಲಿ ಔಟಾದರು ನಾಯಕ ಕೇನ್ ವಿಲಿಯಮ್ಸನ್ 9ರನ್ ಗಳಿಸಿ ರಿಲೆ ಮೆರೆಡಿತ್ ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ 43ರನ್ ಗಳಿಸಿದ್ದು ಝಂಪಾ ಬೌಲಿಂಗ್ ನಲ್ಲಿ ಔಟಾದರು.
ಬಳಿಕ ಗ್ಲೇನ್ ಫಿಲಿಪ್ಸ್ 13ರನ್ ಗಳಿಸಿ ಔಟಾದರೆ ನ್ಯೂಜಿಲೆಂಡ್ ತಂಡಕ್ಕೆ ಆಸರೆಯಾಗಿದ್ದ ಕೊನ್ವೆ 38ರನ್ ಗಳಿಸಿದ್ದು ಅಗರ್ ಗೆ ತಮ್ಮ ವಿಕೆಟ್ ಒಪ್ಪಿಸಿದರು. ಸತತ ವಿಕೆಟ್ ಗಳನ್ನು ಕಳೆದುಕೊಂಡ ನ್ಯೂಜಿಲ್ಯಾಂಡ್ 144ರನ್ ಗಳಿಸಿ ಸೋಲೋಪ್ಪಿಕೊಂಡಿತು.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಇಂದು ಮೊದಲ ಜಯ ಗಳಿಸಿದೆ. ನ್ಯೂಜಿಲೆಂಡ್ ತಂಡ 2-1ರಿಂದ ಮುನ್ನಡೆಯಲ್ಲಿದೆ.