Sunday, 15th December 2024

Tabla Maestro: ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ ಜಾಕಿರ್‌ ಹುಸೇನ್‌ ಆರೋಗ್ಯ ಸ್ಥಿತಿ ಗಂಭೀರ; ಐಸಿಯುನಲ್ಲಿ ಚಿಕಿತ್ಸೆ

ನವದೆಹಲಿ: ತಬಲಾ ಮಾಂತ್ರಿಕ(Tabla Maestro) ಜಾಕಿರ್ ಹುಸೇನ್(Zakir Hussain) ಅವರು ಹೃದಯ ಸಂಬಂಧಿ ಕಾಯಿಲೆಯಿಂದ(Heart Related Problems) ಬಳಲುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿಯು ತೀರಾ ಗಂಭೀರವಾಗಿರುವುದರಿಂದ ಸ್ಯಾನ್ ಫ್ರಾನ್ಸಿಸ್ಕೋ(San Francisco ) ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದೆ ಎಂದು ಕೊಳಲು ವಾದಕ ರಾಕೇಶ್ ಚೌರಾಸಿಯಾ(Rakesh Chaurasia) ಭಾನುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

73 ವರ್ಷದ ಜಾಕಿರ್‌ ಹುಸೇನ್‌ ಅವರಿಗೆ ರಕ್ತದೊತ್ತಡ ಸಮಸ್ಯೆ ಇತ್ತು ಎಂದು ಅವರ ಹತ್ತಿರದ ಸಂಬಂಧಿಗಳಿಂದ ಮಾಹಿತಿ ದೊರೆತಿದೆ. ಕಳೆದ ವಾರ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು,ಹೃದಯ ಸಂಬಂಧಿ ಕಾಯಿಲೆಯಿಂದ ಪರಿಸ್ಥಿತಿಯು ಗಂಭೀರವಾದ್ದರಿಂದ ಸ್ಯಾನ್ ಫ್ರಾನ್ಸಿಸ್ಕೋದ  ಆಸ್ಪತ್ರೆಗೆ ದಾಖಲಿಸಿದ್ದು,ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎನ್ನಲಾಗಿದೆ.

ತಬಲಾ ಮಾಂತ್ರಿಕ ಜಾಕಿರ್‌ ಹುಸೇನ್

ಉಸ್ತಾದ್‌ ಜಾಕಿರ್‌ ಹುಸೇನ್‌ ಅಂತಾರಾಷ್ಟ್ರೀಯ ಖ್ಯಾತಿಯ ತಬಲಾ ವಾದಕ. ಶ್ರೇಷ್ಠ ತಬಲಾ ವಾದಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 1951ರ ಮಾರ್ಚ್‌ 9ರಂದು ಇವರ ಜನನ. ಮುಂಬೈ ಜನ್ಮಸ್ಥಳ. ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತ ಮತ್ತು ಜಾಝ್‌ ಫ್ಯೂಷನ್‌ ಅನ್ನು ಅಭ್ಯಾಸ ಮಾಡಿದ್ದಾರೆ. ಕಳೆದ ಅರವತ್ತು ವರ್ಷಗಳಲ್ಲಿ ವಿಶ್ವದಾದ್ಯಂತ ಸಾವಿರಾರು ಸಂಗೀತ ಕಚೇರಿಗಳನ್ನು ನೀಡಿದ್ದಾರೆ. ತಮ್ಮದೇ ಅಭಿಮಾನಿಗಳ ವರ್ಗವನ್ನು ಸಂಪಾದಿಸಿರುವ ಜಾಕಿರ್‌ ಹುಸೇನ್‌ ನೂರಾರು ಶಿಷ್ಯರನ್ನು ಹುಟ್ಟು ಹಾಕಿ ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿನ ಇವರ ಅಸಾಧಾರಣ ಸಾಧನೆಗೆ ಪದ್ಮಶ್ರೀ,ಪದ್ಮಭೂಷಣ ಮತ್ತು ಪ್ರತಿಷ್ಠಿತ ಗ್ರಾಮ್ಮೀ ಪ್ರಶಸ್ತಿ ದೊರೆತಿದೆ.

ಬಿಜೆಪಿ ಭೀಷ್ಮ ಎಲ್.ಕೆ. ಅಡ್ವಾಣಿ ಆಸ್ಪತ್ರೆಗೆ ದಾಖಲು; ಆರೋಗ್ಯ ಸ್ಥಿರ

ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ನಿನ್ನೆ(ಡಿ.14) ಅವರನ್ನು ದೆಹಲಿಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.97 ವರ್ಷದ ಅಡ್ವಾಣಿ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಎರಡು ದಿನಗಳ ಹಿಂದೆಯೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನರರೋಗ ತಜ್ಞ ಡಾ.ವಿನಿತ್ ಸೂರಿ ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಕಳೆದ ಜುಲೈನಲ್ಲಿ ಅಡ್ವಾಣಿ ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರ ವಿಭಾಗದ ವೈದ್ಯರಿಂದ ಚಿಕಿತ್ಸೆ ಪಡೆದುಕೊಂಡಿದ್ದರು. ನಂತರ ಆಗಸ್ಟ್‌ನಲ್ಲಿ ಇದೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದರು.

ಅಯೋಧ್ಯೆ ರಾಮಮಂದಿರ ಹೋರಾಟದ ಮೂಲಕ ಹಿಂದುತ್ವದ ನಾಯಕ, ‘ಲೋಹ ಪುರುಷ’ ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ 1927ರ ನವೆಂಬ‌ರ್ 8ರಂದು ಅವಿಭಜಿತ ಭಾರತದ ಕರಾಚಿಯಲ್ಲಿ (ಈಗಿನ ಪಾಕಿಸ್ತಾನ) ಜನಿಸಿದ್ದರು. ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಸಿಂದ್ ಪ್ರಾಂತ್ಯದ ಹೈದರಾಬಾದ್‌ನ ಡಿ.ಜಿ.ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಬಳಿಕ ಬಾಂಬೆಯ ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದರು. 1947ರಲ್ಲಿ ಆರ್‌ಎಸ್‌ಎಸ್‌ ಸೇರಿದ ಅವರು, ರಾಜಸ್ಥಾನದಲ್ಲಿ ಸಂಘದ ಉಸ್ತುವಾರಿ ವಹಿಸಿಕೊಂಡಿದ್ದರು. ನಂತರ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದರು. ರಾಮ ರಥ ಯಾತ್ರೆಯಲ್ಲಿ ಮುಂಚೂಣಿಯಲ್ಲಿದ್ದು ಅಯೋಧ್ಯೆಯಲ್ಲಿ ಶ್ರೀರಾಮನ ದೇವಸ್ಥಾನದ ನಿರ್ಮಾಣಕ್ಕೆ ಸಾಕಷ್ಟು ಶ್ರಮಿಸಿದ್ದರು. ಭಾರತ ದೇಶದ ಉಪ ಪ್ರಧಾನಿಯಾಗಿಯೂ ಕೆಲಸ ಮಾಡಿದ್ದರು. ಅವರ ಸೇವೆಗಾಗಿ ಈ ಬಾರಿಯ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿತ್ತು.

ಈ ಸುದ್ದಿಯನ್ನೂ ಓದಿ:Viral News: 26 ವರ್ಷಗಳ ಹಿಂದೆ ಕಿಡ್ನಾಪ್‌ ಆಗಿದ್ದವ ಮರಳಿ ಕೋಟ್ಯಧಿಪತಿ ಪೋಷಕರ ಮಡಿಲಿಗೆ- ಆದರೂ ಈ ಶ್ರೀಮಂತಿಕೆ ಬೇಡ ಎಂದಿದ್ದೇಕೆ?