Friday, 22nd November 2024

Tahawwur Rana : ʻಭಾರತಕ್ಕೆ ಹಸ್ತಾಂತರ ಬೇಡವೆಂದು ಅಮೆರಿಕಾ ಸುಪ್ರೀಂಗೆ ಮೊರೆ ಹೋದ ಮುಂಬೈ ದಾಳಿ ಆರೋಪಿ ತಹವ್ವುರ್​ ರಾಣಾ!

Tahawwur Rana

ವಾಷಿಂಗ್ಟನ್‌ : 2008ರ ಮುಂಬೈ ಭಯೋತ್ಪಾದನಾ ದಾಳಿಯ (Mumbai terror attack) ಆರೋಪಿ ಪಾಕಿಸ್ತಾನಿ ಮೂಲದ ಕೆನಡಾದ ಪ್ರಜೆ ತಹವ್ವುರ್ ರಾಣಾ (Tahawwur Rana) ತನ್ನನ್ನು ಭಾರತಕ್ಕೆ ಹಸ್ತಾಂತರಿಸುವುದನ್ನು ತಡೆಯಲು ಅಮೆರಿಕದ ಸುಪ್ರೀಂ (US Supreme Court) ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆಂದು ತಿಳಿದು ಬಂದಿದೆ. ಈ ಹಿಂದೆ ಅಮೆರಿಕ ಕೋರ್ಟ್ ಆಫ್ ಅಪೀಲ್ಸ್ ಸೇರಿದಂತೆ ಕೆಳ ಮತ್ತು ಫೆಡರಲ್ ನ್ಯಾಯಾಲಕ್ಕೆ ಮನವಿ ಸಲ್ಲಿಸಿದ್ದರು. ಮೊದಲು ಸೆಪ್ಟೆಂಬರ್ 23 ರಂದು ಯುನೈಟೆಡ್ ಸ್ಟೇಟ್ಸ್ ಕೋರ್ಟ್ ಆಫ್ ಅಪೀಲ್ ರಾಣಾ ಮನವಿಯನ್ನು ತಿರಸ್ಕರಿಸಿತ್ತು. ಹಸ್ತಾಂತರ ಒಪ್ಪಂದದ ಅಡಿಯಲ್ಲಿ ಆರೋಪಿಗಳನ್ನು ಭಾರತಕ್ಕೆ ಹಸ್ತಾಂತರಿಸಬಹುದು ಎಂದು ನ್ಯಾಯಾಲಯ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಆರೋಪಿ ಅಮೆರಿಕ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ.

ಆರು ಮಂದಿ ಅಮೆರಿಕನ್ನರು ಸೇರಿದಂತೆ 166 ಜನರ ಸಾವಿಗೆ ಕಾರಣವಾಗಿದ್ದ 26/11ರ ಮುಂಬೈನ ತಾಜ್‌ ಹೋಟೆಲ್‌ ಮೇಲಿನ ದಾಳಿಗೆ ನೆರವು ನೀಡಿದ್ದ ಆರೋಪದಲ್ಲಿ ತಹವ್ವುರ್ ರಾಣಾನನ್ನು ಹಸ್ತಾಂತರಿಸುವಂತೆ ಭಾರತ, ಅಮೆರಿಕಕ್ಕೆ ಮನವಿ ಮಾಡಿಕೊಂಡಿತ್ತು. ಪಾಕಿಸ್ತಾನಿ-ಅಮೆರಿಕನ್ ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜೊತೆಗಿನ ಒಡನಾಟಕ್ಕೆ ಹೆಸರುವಾಸಿಯಾಗಿರುವ ರಾಣಾ, ಲಷ್ಕರ್-ಎ-ತೈಬಾ ಗುಂಪಿಗೆ ಸಹಾಯ ಮಾಡಿದ್ದಾರೆಂಬ ಆರೋಪವಿದೆ.

2008ರ ಮುಂಬೈ ದಾಳಿ ಆರೋಪಗಳಿಗೆ ಸಂಬಂಧಿಸಿದಂತೆ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ಚಿಕಾಗೋದ ಫೆಡರಲ್ ನ್ಯಾಯಾಲಯದಲ್ಲಿ ಈ ಹಿಂದೆ ವಿಚಾರಣೆ ನಡೆಸಿತ್ತು. ಆದರೆ ನ್ಯಾಯಾಲಯ ರಾಣಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತ್ತು ಮತ್ತು ಎರಡನೇ ಬಾರಿ ವಿಚಾರಣೆಗೆ ಒಳಪಡಿಸಲು ಭಾರತಕ್ಕೆ ಕಳುಹಿಸಲಾಗುವುದು ಎಂದು ಕೋರ್ಟ್‌ ಹೇಳಿತ್ತು. ಅಪರಾಧ ಸಾಬೀತಾದರೆ ಮರಣದಂಡನೆ ಶಿಕ್ಷೆ ಕೂಡ ಆಗಬಹುದು ಎಂದು ತನ್ನ ತೀರ್ಪಿನಲ್ಲಿ ಉಲ್ಲೇಖ ಮಾಡಿತ್ತು.

ಯಾರು ಈ ತಹವ್ವುರ್ ರಾಣಾ ?

ಪಾಕಿಸ್ತಾನದ ಪಂಜಾಬ್‌ನ ಚಿಚಾವಟ್ನಿಯಲ್ಲಿ ಜನಿಸಿದ ರಾಣಾ , ವೃತ್ತಿಯಲ್ಲಿ ವೈದ್ಯರಾಗಿದ್ದರು. ಇವರು ಪಾಕಿಸ್ತಾನದ ಸೇನಾ ವೈದ್ಯಕೀಯ ಕಾರ್ಪ್ಸ್‌ನಲ್ಲಿ ಕ್ಯಾಪ್ಟನ್ ಜನರಲ್ ಡ್ಯೂಟಿ ಪ್ರಾಕ್ಟೀಷನರ್ ಆಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯ ನಂತರ, ರಾಣಾ 1997ರಲ್ಲಿ ಕೆನಡಾಕ್ಕೆ ತೆರಳಿದ್ದರು. ಚಿಕಾಗೋ, ನ್ಯೂಯಾರ್ಕ್ ಮತ್ತು ಟೊರೊಂಟೊದಲ್ಲಿ ವಲಸೆ ಸೇವಾ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ. ಇವರು ಭಯೋತ್ಪಾದಕರ ಜತೆಗೆ ನಂಟು ಹೊಂದಿದ್ದರು ಎಂದು ಭಾರತೀಯ ಗುಪ್ತಚರ ಇಲಾಖೆ ತಿಳಿಸಿತ್ತು. ಲಷ್ಕರ್-ಎ-ತೈಬಾ ಹಾಗೂ ಐಸಿಸ್‌ ಜತೆ ನೇರ ಸಂಪರ್ಕ ಹೊಂದಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು. 2008 ರಲ್ಲಿ ಮುಂಬೈನ ತಾಜ್‌ ಹೋಟೆಲ್‌ ಮೇಲೆ ನಡೆದಿದ್ದ ದಾಳಿಯಲ್ಲಿ ಇವರ ಸಹಾಯ ಇದೆ ಎಂಬುದು ಕೇಳಿ ಬಂದಿತ್ತು.

ಇದನ್ನೂ ಓದಿ : Anmol Boshnoi: ಅಮೆರಿಕದಲ್ಲಿ ತಲೆಮರೆಸಿಕೊಂಡಿರುವ ಲಾರೆನ್ಸ್‌ ಬಿಷ್ಣೋಯ್‌ ಸಹೋದರನಿಗೆ ಭಾರೀ ಸಂಕಷ್ಟ- ಶುರುವಾಯ್ತು ಹಸ್ತಾಂತರ ಪ್ರಕ್ರಿಯೆ