Thursday, 12th December 2024

ತಮಿಳಿನ ನಿರ್ಮಾಪಕ, ನಟ ವಿಜಯ್​ ಆಂಟನಿ ಪುತ್ರಿ ಆತ್ಮಹತ್ಯೆ

ಚೆನ್ನೈ: ಸಂಗೀತ ಸಂಯೋಜಕ ಮತ್ತು ನಟ ವಿಜಯ್ ಆಯಂಟನಿ ಅವರ ಪುತ್ರಿ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ವಿಜಯ್ ಆಯಂಟನಿ ತಮ್ಮ ಕುಟುಂಬದೊಂದಿಗೆ ಚೆನ್ನೈನ ಡಿಡಿಕೆ ರಸ್ತೆಯಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇವರಿಗೆ ಮೀರಾ ಮತ್ತು ಲಾರಾ ಎಂಬಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿ ಮಗಳು ಮೀರಾ ಚೆನ್ನೈನ ಖಾಸಗಿ ಕಾಲೇಜಿನಲ್ಲಿ 12ನೇ ತರಗತಿ ವ್ಯಾಸಂಗ ಮಾಡುತ್ತಿದ್ದರು.

ಸೆಪ್ಟೆಂಬರ್​ 18ರ ರಾತ್ರಿ ಕೊಂಚ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ನಂತರ, ನಿದ್ರಿಸುವುದಾಗಿ ಹೇಳಿ ಕೊಠಡಿಗೆ ಹೋಗಿದ್ದಾರೆ. ಇಂದು ಬೆಳಗ್ಗೆ ಮಗಳನ್ನು ಕರೆಯಲು ತಂದೆ ಕೋಣೆಗೆ ತೆರಳಿದ್ದಾರೆ. ಆಗ ಆಕೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದುದನ್ನು ಕಂಡು ಆಘಾತಕ್ಕೊಳಗಾಗಿದ್ದಾರೆ. ಕೂಡಲೇ ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು ಬಾಲಕಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಬಾಲಕಿ ಮಾನಸಿಕ ಖಿನ್ನತೆಗೊಳಗಾಗಿದ್ದು, ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ವಿಜಯ್ ಕೆಲವು ತಿಂಗಳ ಹಿಂದೆ ಪಿಚೈಕರನ್ ಭಾಗ 2 ಸಿನಿಮಾ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿ ಸ್ವಲ್ಪದರಲ್ಲೇ ಪಾರಾಗಿದ್ದರು. ವಿಜಯ್ ಆಯಂಟನಿ ತೆಲುಗು ಹಾಗೂ ತಮಿಳು ಸಿನಿಮಾದಲ್ಲಿ ಸಕ್ರಿಯರಾಗಿರುವ ನಟ. ಬಿಚ್ಚಗಾಡು ಸಿನಿಮಾ ಮೂಲಕ ತೆಲುಗಿನಲ್ಲಿ ಜನಪ್ರಿಯತೆ ಗಳಿಸಿದ್ದಾರೆ.