Thursday, 19th September 2024

ಹಿಮಬಂಡೆ ಸ್ಫೋಟ: 50 ದಾಟಿದ ಮೃತರ ಸಂಖ್ಯೆ

ನವದೆಹಲಿ: ಉತ್ತರಾಖಂಡ್ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಬಂಡೆ ಸ್ಫೋಟ ಮತ್ತು ಪ್ರವಾಹ ದುರಂತ ಘಟನೆಯಲ್ಲಿ ಮಡಿದವರ ಸಂಖ್ಯೆ ಏರುತ್ತಲಿದೆ.

ಕಳೆದ ಭಾನುವಾರ ತಪೋವನ್ ಸುರಂಗದಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ. ರೈನಿ ಗ್ರಾಮದಲ್ಲಿ ಏಳು ಮಂದಿಯ ಶವ ಸಿಕ್ಕಿವೆ. ಇದರೊಂದಿಗೆ ಮೃತ ದೇಹಗಳ ಸಂಖ್ಯೆ 51ಕ್ಕೆ ಏರಿದೆ. ಇನ್ನೂ 150ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಇವರು ಬದುಕಿರುವ ಸಾಧ್ಯತೆ ತೀರಾ ಕಡಿಮೆ ಇದೆ ಎನ್ನಲಾಗುತ್ತಿದೆ.

ತಪೋವನ್​ನಲ್ಲಿ ಎನ್​ಟಿಪಿಸಿಯಿಂದ 520 ಮೆಗಾ ವ್ಯಾಟ್​ನ ಬೃಹತ್ ವಿದ್ಯುತ್ ಯೋಜನೆ ನಡೆಯುತ್ತಿತ್ತು. ಎಲ್ಲವೂ ಪ್ರವಾಹದಲ್ಲಿ ಕೊಚ್ಚಿ ಹೋಗಿದೆ. ಇನ್ನೂ 39 ಮಂದಿ ಸಿಲುಕಿರುವ ಶಂಕೆ ಇದೆ.

ಸುರಂಗದ ಮೊದಲ 125 ಮೀಟರ್​ನಷ್ಟು ದೂರದ ಪ್ರದೇಶದಲ್ಲಿ ಜೆಸಿಬಿ ಮೂಲಕ ಕೆಸರು ಹೊರಹಾಕಲಾಗಿದೆ. ಆದರೆ, ಆ ಬಳಿಕ ಸುರಂಗ ಕಿರಿದಾಗುತ್ತಿರುವುದರಿಂದ ಸಣ್ಣ ಯಂತ್ರಗಳ ಮೂಲಕ ಕೆಸರು ಹೊರಹಾಕಲಾಗುತ್ತಿದೆ.

ಚಮೋಲಿ ಜಿಲ್ಲೆಯಲ್ಲಿ ಧೌಲಿಗಂಗಾ ನದಿಯ ಹಿಮಬಂಡೆ ಸ್ಫೋಟಗೊಂಡ ಪರಿಣಾಮ ಗಂಗಾ ನದಿಯ ಉಪನದಿಗಳಾದ ಧೌಲಿ ಗಂಗಾ ಮತ್ತು ಅಲಕನಂದ ನೀರು ಉಕ್ಕೇರಿ ಭೀಕರ ಪ್ರವಾಹ ಸೃಷ್ಟಿಯಾಗಿತ್ತು. ನದಿ ಪಾತ್ರದ ಅನೇಕ ಪ್ರದೇಶಗಳಿಗೆ ಪ್ರವಾಹ ನುಗ್ಗಿತ್ತು.