Friday, 22nd November 2024

ತರುಣ್‌ ತೇಜ್‌ಪಾಲ್‌ ಅತ್ಯಾಚಾರ ಪ್ರಕರಣ: ಮೇ.12ರಂದು ತೀರ್ಪು ಪ್ರಕಟ

ಪಣಜಿ: ‘ತೆಹೆಲ್ಕಾ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್‌ ತೇಜ್‌ಪಾಲ್‌ ವಿರುದ್ಧದ ಅತ್ಯಾಚಾರ ಪ್ರಕರಣದ ತೀರ್ಪನ್ನು ಮೇ.12ರಂದು ಪ್ರಕಟಿಸುವುದಾಗಿ ಗೋವಾ ಸೆಷನ್ಸ್ ನ್ಯಾಯಾಲಯ ತಿಳಿಸಿದೆ.

ಈ ಮೊದಲು ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಮಂಗಳವಾರ ತೀರ್ಪು ಪ್ರಕಟಿಸಬೇಕಿತ್ತು. ನ್ಯಾಯಾಧೀಶೆ ಕ್ಷಮಾ ಜೋಶಿ ತೀರ್ಪನ್ನು ಮೇ.12 ಕ್ಕೆ ಪ್ರಕಟಿಸುವುದಾಗಿ ಹೇಳಿದರು. ಸರ್ಕಾರದ ಪರ ವಕೀಲ ಫ್ರಾನ್ಸಿಸ್ಕೊ ಟವರೆಸ್‌ ‘ಯಾವ ಕಾರಣವನ್ನೂ ನೀಡದೇ ನ್ಯಾಯಾಧೀಶರು ತೀರ್ಪನ್ನು ಮುಂದೂಡಿದ್ದಾರೆ’ ಎಂದು ತಿಳಿಸಿದರು.

2013ರಲ್ಲಿ ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ್ದಾರೆ ಎಂದು ತೇಜ್‌ಪಾಲ್‌ ವಿರುದ್ಧ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕಳೆದ ಮಾರ್ಚ್‌ನಲ್ಲಿ ಮುಕ್ತಾಯಗೊಂಡಿದ್ದು, ತೀರ್ಪನ್ನು ಏ.27ಕ್ಕೆ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು.

ಏನಿದು ಪ್ರಕರಣ?
ತೆಹಲ್ಕಾದ ಸಂಸ್ಥಾಪಕ -ಸಂಪಾದಕ ತರುಣ್ ತೇಜ್‌ಪಾಲ್ 2013ರಲ್ಲಿ ಥಿಂಕ್ ಫೆಸ್ಟ್ ಕಾರ್ಯಕ್ರಮದ ವೇಳೆ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಅದೇ ಸಂಸ್ಥೆಯ ಕಿರಿಯ ಸಹೋದ್ಯೋಗಿಯೊಬ್ಬರು ಆರೋಪಿಸಿದ್ದರು. ಪಂಚತಾರಾ ಹೋಟೆಲ್‌ನ ಲಿಫ್ಟ್‌ನಲ್ಲಿ ತರುಣ್ ಲೈಂಗಿಕ ದೌರ್ಜನ್ಯವೆಸಗಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದರು.