Wednesday, 9th October 2024

ಟಾಟಾ ಕಂಪನಿಯಿಂದ ಗುಜರಾತ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕ ಆರಂಭ ಶೀಘ್ರ

ವದೆಹಲಿ: ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಲು ಮತ್ತು ಮೂಲ ಸೌಕರ್ಯವನ್ನು ಕಲ್ಪಿಸುವುದಕ್ಕಾಗಿ ಟಾಟಾ ಕಂಪನಿಯು ಗುಜರಾತ್‌ನಲ್ಲಿ 13000 ಕೋಟಿ ರೂ.ವೆಚ್ಚದ ಬೃಹತ್ ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ ತಯಾರಿಕಾ ಘಟಕವನ್ನು ಆರಂಭಿಸಲಿದೆ.

ಟಾಟಾ ಕಂಪನಿಯು ಈ ಸಂಬಂಧ ಗುಜರಾತ್ ಸರ್ಕಾರದೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದೆ. ಟಾಟಾ ಗ್ರೂಪ್‌ನ ಅಂಗಸಂಸ್ಥೆ ಟಾಟಾ ಅಗರತಾಸ್ ಎನರ್ಜಿ ಸ್ಟೋರೇಜ್ ಸೊಲ್ಯೂಷನ್ಸ್ ಪ್ರೈವೇಟ್ ಶುಕ್ರವಾರ 20 ಗಿಗಾವ್ಯಾಟ್ ಗಂಟೆಗಳ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ವಿದ್ಯುತ್-ವಾಹನ ಬ್ಯಾಟರಿ ಘಟಕ ಸ್ಥಾಪಿ ಸಲು ತಿಳುವಳಿಕೆ ಪತ್ರಕ್ಕೆ ಸಹಿ ಹಾಕಿದೆ. ಇದು 13,000 ಕ್ಕೂ ಹೆಚ್ಚು ಜನರಿಗೆ ನೇರ ಮತ್ತು ಪರೋಕ್ಷ ಉದ್ಯೋಗವನ್ನು ಸೃಷ್ಟಿಸುತ್ತದೆ ಎಂದು ಕಂಪನಿಯ ಜಾಲತಾಣದಲ್ಲಿ ತಿಳಿಸಲಾಗಿದೆ.

2070ರ ಹೊತ್ತಿಗೆ ಭಾರತವನ್ನು ಶೂನ್ಯ ಕಾರ್ಬನ್ ರಾಷ್ಟ್ರವನ್ನಾಗಿ ಮಾಡಲು ಕೇಂದ್ರ ಸರ್ಕಾರ ನಾನಾ ಯೋಜನೆ ಗಳನ್ನು ಹಾಕಿಕೊಂಡಿದೆ. ಈ ವಿಷಯದಲ್ಲಿ ಭಾರತವು ಈಗಲೂ ಚೀನಾ, ಅಮೆರಿಕ ಸೇರಿದಂತೆ ಕೆಲವು ರಾಷ್ಟ್ರಗಳ ಹಿಂದೆಯೇ ಇದೆ. ಟಾಟಾ ಘಟಕವು ಗುಜರಾತ್ ಅನ್ನು ಲಿಥಿಯಂ-ಬ್ಯಾಟರಿ ಉತ್ಪಾದನೆಯಲ್ಲಿ ಮುಂಚೂಣಿಗೆ ತರಲಿದೆ.

ಟಾಟಾ ಗ್ರೂಪ್‌ನ ಈ ನಿರ್ಧಾರವು ಅದರ ಜಾಗ್ವಾರ್ ಲ್ಯಾಂಡ್ ರೋವರ್ ಘಟಕವು ಬ್ರಿಟನ್‌ನಲ್ಲಿ ಪ್ರಮುಖ ಇವಿ ಬ್ಯಾಟರಿ ಸ್ಥಾವರವನ್ನು ಸ್ಥಾಪಿಸಲು ಪರಿಗಣಿಸುತ್ತಿರುವ ಸಮಯದಲ್ಲಿ ಬಂದಿದೆ.