ಶ್ರೀನಗರ: ಟಾಟಾ ಪಂಚ್ ಕಾರು ನಿಯಂತ್ರಣ ತಪ್ಪಿ ಕಡಿದಾದ ಕಣಿವೆಗೆ ಉರುಳಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಜಮ್ಮು ಮತ್ತು ಕಾಶ್ಮೀರ ನೋಂದಣಿಯ ಟಾಟಾ ಪಂಚ್ ಕಾರು ಕಣಿವೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದೆ.
ಕಾರಿನವ ಮುಂಭಾಗ ರಸ್ತೆಯಿಂದ ಮುಂದಕ್ಕೆ ಬಂದಿದ್ದು, ಕಾರು ಕಣಿವೆಗೆ ಉರುಳುವ ಅಪಾಯಕ್ಕೆ ಸಿಲುಕಿತ್ತು. ಕೂಡಲೇ ಅಪಾಯ ಅರಿತ ಚಾಲಕ ಸ್ಥಳೀಯರನ್ನು ನೆರವಿಗೆ ಕೂಗಿದ್ದು, ಈ ವೇಳೆ ಇಳಿಜಾರಿಗೆ ಇಳಿದ ಇಬ್ಬರು ಸ್ಥಳೀಯರು ಕಾರನ್ನು ಹಿಂದಕ್ಕೆ ತಳ್ಳಲು ಯತ್ನಿಸಿದ್ದಾರೆ.
ಇಳಿಜಾರು ತೀರಾ ಕಡಿದಾದ್ದರಿಂದ ಕಾರು ನೋಡ ನೋಡುತ್ತಲೇ ಕಣಿವೆಯತ್ತ ಜಾರಿದೆ. ಈ ವೇಳೆ ಕಾರನ್ನು ತಡೆಯಲೆತ್ನಿಸಿದ ಇಬ್ಬರೂ ಪಕ್ಕಕ್ಕೆ ಹಾರಿ ಜೀವ ಉಳಿಸಿಕೊಂಡಿದ್ದು, ಕಾರಿನಲ್ಲಿದ್ದ ಚಾಲಕ ಕೂಡ ಹೊರಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ. ಆದರೆ ಹೊರಗೆ ಹಾರುವಾಗ ಆತನ ಕಾಲು ಕಾರಿ ಸಿಲುಕಿ ಕೊಂಚ ದೂರ ಎಳೆದುಕೊಂಡು ಹೋಗಿದೆ. ಇದರಿಂದ ಚಾಲಕನಿಗೆ ಗಾಯಗಳಾಗಿವೆ ಎಂದು ಹೇಳಲಾಗಿದೆ.
ವಿಡಿಯೋವನ್ನು ಪ್ರತೀಕ್ ಸಿಂಗ್ ಎಂಬುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.