ನವದೆಹಲಿ: ಅಡುಗೆ ತೈಲದರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಕಚ್ಚಾ ತಾಳೆ ಎಣ್ಣೆ ಆಮದು ಸುಂಕ ಕಡಿತ ಗೊಳಿಸಿದೆ.
ದೇಶಿ ಗ್ರಾಹಕರಿಗೆ ಮತ್ತು ಸಂಸ್ಕರಣಾಗಾರರಿಗೆ ನೆರವಾಗುವ ಉದ್ದೇಶದೊಂದಿಗೆ, ಕಚ್ಚಾ ತಾಳೆ ಎಣ್ಣೆಯ ಆಮದು ಸುಂಕವನ್ನು ಶೇ 7.5 ರಿಂದ ಶೇ 5ಕ್ಕೆ ಇಳಿಕೆ ಮಾಡಲಾ ಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ತಾಳೆ ಎಣ್ಣೆ ಆಮದಿನ ಮೇಲೆ ವಿಧಿಸಲಾಗುತ್ತಿರುವ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ತೆರಿಗೆಯಲ್ಲಿ (ಎಐಡಿಸಿ) ಕಡಿತ ಮಾಡಲಾ ಗಿದ್ದು, ಇದರಿಂದ ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿತ ತಾಳೆ ಎಣ್ಣೆ ನಡುವಣ ತೆರಿಗೆ ಅಂತರ ಹೆಚ್ಚಾಗಲಿದೆ.
ದೇಶದ ಸಂಸ್ಕರಣಾಗಾರರಿಗೆ ಕಡಿಮೆ ಬೆಲೆಗೆ ಕಚ್ಚಾ ತಾಳೆ ಎಣ್ಣೆ ಆಮದು ಮಾಡಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಸುಂಕ ಕಡಿತ ನಿರ್ಧಾರವು ಭಾನುವಾರದಿಂದಲೇ ಜಾರಿಗೆ ಬಂದಿದೆ. ಎಐಡಿಸಿ ಕಡಿತದ ಬಳಿಕ ಕಚ್ಚಾ ತಾಳೆ ಎಣ್ಣೆ ಮತ್ತು ಸಂಸ್ಕರಿತ ತಾಳೆ ಎಣ್ಣೆ ಆಮದು ಸುಂಕದ ನಡುವಣ ಅಂತರ ಶೇ 8.25 ತಲುಪಿದೆ. ಇದರಿಂದ ಸಂಸ್ಕರಣಾಗಾರರಿಗೆ ಪ್ರಯೋಜನವಾಗಲಿದೆ. ಈ ಅಂತರವನ್ನು ಶೇ 11ರ ವರೆಗೆ ಹೆಚ್ಚಿಸಬೇಕಿದೆ ಎಂದು ‘ಸಾಲ್ವೆಂಟ್ ಎಕ್ಸ್‌ಟ್ರಾಕ್ಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಸ್‌ಇಎ)’ದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ವಿ. ಮೆಹ್ತಾ ಹೇಳಿದ್ದಾರೆ.