ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರಿಗೆ 100 ರೂ.ಗಳ ಮನಿ ಆರ್ಡರ್ ಕಳುಹಿಸಿ ಕೊಟ್ಟಿರುವ ಮಹಾರಾಷ್ಟ್ರದ ಬಾರಾಮತಿಯ ಚಹಾ ಮಾರಾಟಗಾರರೊಬ್ಬರು ಉದ್ದನೆಯ ಗಡ್ಡವನ್ನು ಬೋಳಿಸಿಕೊಳ್ಳಿ ಎಂಬ ಸಂದೇಶವನ್ನು ರವಾನಿಸಿದ್ದಾರೆ ಎಂಬುದು ವರದಿ ಯಾಗಿದೆ.
ಕೋವಿಡ್-ಪ್ರೇರಿತ ಲಾಕ್ಡೌನ್ ನಿಂದಾಗಿ ಅಸಂಘಟಿತ ವಲಯಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಇದರಿಂದ ಅಸಮಾಧಾನಗೊಂಡ ಇಂದಾಪುರ ರಸ್ತೆಯ ಖಾಸಗಿ ಆಸ್ಪತ್ರೆಯ ಎದುರಿನ ಸಣ್ಣ ಚಹಾ ಅಂಗಡಿ ಮಾಲಕ ಅನಿಲ್ ಮೋರೆ, ‘ಪ್ರಧಾನಿ ಮೋದಿ ಗಡ್ಡ ವನ್ನು ಬೆಳೆಸಿದ್ದಾರೆ. ಅವರು ಈ ದೇಶದ ಜನರಿಗೆ ಉದ್ಯೋಗಾವ ಕಾಶಗಳನ್ನು ಹೆಚ್ಚಿಸಬೇಕು. ದೇಶದ ಜನರಿಗೆ ವ್ಯಾಕ್ಸಿನೇಷನ್ ವೇಗಗೊಳಿಸಲು ಪ್ರಯತ್ನಿಸಬೇಕು ಹಾಗೂ ಅಸ್ತಿತ್ವದಲ್ಲಿರುವ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕು ಎಂದರು.
ನಾನು ಉಳಿತಾಯ ಮಾಡಿರುವ 100 ರೂ.ಗಳನ್ನು ಅವರಿಗೆ ರೂ.ಕಳುಹಿಸಿದ್ದೇನೆ. ಅದರಿಂದ ಅವರು ತನ್ನ ಗಡ್ಡವನ್ನು ಕ್ಷೌರ ಮಾಡಿಕೊಳ್ಳಲಿ. ಸಾಂಕ್ರಾಮಿಕ ರೋಗದಿಂದಾಗಿ ದಿನದಿಂದ ದಿನಕ್ಕೆ ಬಡವರ ಸಮಸ್ಯೆಗಳು ಬೆಳೆಯುತ್ತಿರುವುದರಿಂದ ಅವರ ಗಮನ ಸೆಳೆಯಲು ಈ ಮಾರ್ಗ ತುಳಿದಿದ್ದೇನೆ’ಎಂದು ಹೇಳಿದರು.
ಕೋವಿಡ್ ನಿಂದ ಮೃತಪಟ್ಟವರ ಕುಟುಂಬಗಳಿಗೆ 5 ಲಕ್ಷ ರೂ. ಹಾಗೂ ಲಾಕ್ ಡೌನ್ ನಿಂದ ಹಾನಿಗೊಳಗಾದ ಕುಟುಂಬಗಳಿಗೆ 30,000 ರೂ. ಗಳ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮೋರೆ ಒತ್ತಾಯಿಸಿದ್ದಾರೆ.