Friday, 22nd November 2024

ಇನ್ಸಿಂಗ್, 25 ರನ್‌ಗಳಿಂದ ಗೆದ್ದ ಟೀಂ ಇಂಡಿಯಾ

ಅಹಮದಾಬಾದ್‌: ಇಂಗ್ಲೆಂಡ್‌ ವಿರುದ್ದ ನಾಲ್ಕನೇ ಹಾಗೂ ಅಂತಿಮ ಟೆಸ್ಟ್‌ ಪಂದ್ಯವನ್ನು ಇನ್ಸಿಂಗ್‌ ಹಾಗೂ 25 ರನ್‌ಗಳೊಂದಿಗೆ ಟೀಮ್‌ ಇಂಡಿಯಾ ಗೆಲುವನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಸರಣಿಯನ್ನೂ ಕೂಡ 3-1ರೊಂದಿಗೆ ತನ್ನದಾಗಿಸಿಕೊಂಡಿದೆ.

ದ್ವಿತೀಯ ಇನ್ನಿಂಗ್ಸ್‌ನಲ್ಲೂ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕಿದ ಭಾರತೀಯ ಬೌಲರ್‌ಗಳು ಪ್ರಭಾವಿ ದಾಳಿ ಸಂಘಟಿಸಿದರು. ಇನ್ನಿಂಗ್ಸ್ ಸೋಲು ತಪ್ಪಿಸಿಕೊಳ್ಳಲು 25 ರನ್ ಗಳಿಸುವ ಅವಶ್ಯಕತೆ ಇರುವಾಗ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಘಾಟಕ ದಾಳಿ ಸಂಘಟಿಸಿದರು. ಕೊನೆಯ ಎರಡು ವಿಕೆಟ್‌ ಕೀಳುವಬ ಮೂಲಕ ಅಶ್ವಿನ್‌ 30ನೇ ಬಾರಿ ಐದು ವಿಕೆಟ್‌ ಕಿತ್ತ ಸಾಧನೆ ಮಾಡಿದರು. ಸಹ ಆಟಗಾರ ಅಕ್ಷರ್‌ ಪಟೇಲ್‌ ಕೂಡ ಐದು ವಿಕೆಟ್‌ ಕಿತ್ತು, ಪ್ರವಾಸಿಗರ ಇನ್ನಿಂಗ್ಸ್ಗೆ ಮಂಗಳ ಹಾಡಿದರು.

ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾರತೀಯ ಸ್ಪಿನ್ನರ್‌ಗಳು ಸಂಪೂರ್ಣ ಮೇಲುಗೈ ಸಾಧಿಸಿದರು. ಇಂಗ್ಲೆಂಡ್ ನಾಯಕ ಜೋ ರೂಟ್ (30) ಹೊರತುಪಡಿಸಿದರೆ ಇತರೆ ಯಾವ ಬ್ಯಾಟ್ಸ್‌ಮನ್‌ಗಳು ಹೋರಾಟದ ಮನೋಭಾವವನ್ನು ತೋರಲೇ ಇಲ್ಲ. ಜ್ಯಾಕ್ ಕ್ರಾಲಿ (5), ಡಾಮಿನಿಕ್ ಸಿಬ್ಲಿ (3), ಜಾನಿ ಬೈರ್‌ಸ್ಟೋ (0), ಬೆನ್ ಸ್ಟೋಕ್ಸ್ (2) ಹಾಗೂ ಒಲ್ಲಿ ಪಾಪ್ (15) ನಿರಾಸೆ ಮೂಡಿಸಿದರು.

ಈ ಮೊದಲು ರಿಷಭ್ ಪಂತ್ (101), ವಾಷಿಂಗ್ಟನ್ ಸುಂದರ್ (ಅಜೇಯ 96) ಹಾಗೂ ರೋಹಿತ್ ಶರ್ಮಾ (49) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 365 ರನ್ ಪೇರಿಸಿತ್ತು. ಈ ಮೂಲಕ 160 ರನ್‌ಗಳ ಬೃಹತ್ ಮುನ್ನಡೆ ದಾಖಲಿಸುವಲ್ಲಿ ಯಶಸ್ವಿಯಾಗಿತ್ತು.

ಮೂರನೇ ದಿನದಾಟದಲ್ಲಿ ಆಕರ್ಷಕ ಬ್ಯಾಟಿಂಗ್ ಮುಂದುವರಿಸಿದ ವಾಷಿಂಗ್ಟನ್ ಸುಂದರ್ 96 ರನ್ ಗಳಿಸಿ ಅಜೇಯರಾಗುಳಿ ದರು. ಆದರೆ ಮತ್ತೊಂದು ತುದಿಯಿಂದ ಸೂಕ್ತ ಬೆಂಬಲ ದೊರಕದೆ ಚೊಚ್ಚಲ ಶತಕ ಬಾರಿಸುವ ಅವಕಾಶದಿಂದ ವಂಚಿತ ರಾದರು.