Friday, 22nd November 2024

ತೀಸ್ತಾ ಸೆಟಲ್ವಾಡ್ ಅರ್ಜಿ ವಜಾ: ತಕ್ಷಣವೇ ಶರಣಾಗಲು ಸೂಚನೆ

ಅಹ್ಮದಾಬಾದ್: ಗೋಧ್ರ (2002) ರ ನಂತರದ ದಂಗೆಗಳ ಪ್ರಕರಣದಲ್ಲಿ ಮುಗ್ಧರನ್ನು ಸಿಲುಕಿಸಲು ಸಾಕ್ಷ್ಯಗಳನ್ನು ತಿರುಚಿದ ಆರೋಪ ಎದುರಿಸುತ್ತಿರುವ ಸಾಮಾಜಿಕ ಕಾರ್ಯ ಕರ್ತೆ ತೀಸ್ತಾ ಸೆಟಲ್ವಾಡ್ ಸಲ್ಲಿಸಿದ್ದ ಸಾಮಾನ್ಯ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ.
ಸಾಮಾನ್ಯ ಜಾಮೀನು ನೀಡುವುದಕ್ಕೆ ಸಾಧ್ಯವಿಲ್ಲ ತಕ್ಷಣವೇ ಶರಣಾಗಿ ಎಂದು ಕೋರ್ಟ್ ತೀಸ್ತಾ ಸೆಟಲ್ವಾಡ್ ಗೆ ಸೂಚಿಸಿದೆ. ನ್ಯಾ. ನಿಜಾರ್ ದೇಸಾಯಿ ಅವರಿದ್ದ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಮಧ್ಯಂತರ ಜಾಮೀನು ಪಡೆದು ಈಗಾಗಲೇ ಹೊರಗಿರುವ ನೀವು ತಕ್ಷಣವೇ ಶರಣಾಗಬೇಕೆಂದು ಹೇಳಿದೆ.
ಸೆಟಲ್ವಾಡ್ ಮತ್ತು ಸಹ-ಆರೋಪಿಗಳು ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್.ಬಿ.ಶ್ರೀಕುಮಾರ್ ಅವರನ್ನು ಕಳೆದ ವರ್ಷ ಜೂನ್ 25 ರಂದು ಗುಜರಾತ್ ಪೊಲೀಸರು ಕಸ್ಟಡಿಗೆ ತೆಗೆದು ಕೊಂಡರು ಮತ್ತು ಅವರ ಪೊಲೀಸ್ ರಿಮಾಂಡ್ ಮುಗಿದ ನಂತರ ನ್ಯಾಯಾಲಯವು ಜು.2 ರಂದು ಅವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು.
ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ಜಾಮೀನು ಆಧಾರದಲ್ಲಿ ಸೆಟಲ್ವಾಡ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. 2002 ರ ಗೋಧ್ರಾ ನಂತರದ ಗಲಭೆ ಪ್ರಕರಣಗಳಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವಿಶೇಷ ತನಿಖಾ ತಂಡ ನೀಡಿದ ಕ್ಲೀನ್ ಚಿಟ್ ಅನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಅರ್ಜಿಯನ್ನು ವಜಾಗೊಳಿಸಿದ ಒಂದು ದಿನದ ನಂತರ ಅಹಮದಾಬಾದ್ ಅಪರಾಧ ವಿಭಾಗ ಸೆಟಲ್ವಾಡ್, ಶ್ರೀಕುಮಾರ್ ಮತ್ತು ಜೈಲಿನಲ್ಲಿರುವ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ವಿರುದ್ಧ ಎಫ್ಐಆರ್ ದಾಖಲಿಸಿತ್ತು.