Sunday, 15th December 2024

83 ಅತ್ಯಾಧುನಿಕ ತೇಜಸ್ ಜೆಟ್ ಸರಬರಾಜಿಗೆ 48,000 ಕೋಟಿ ರೂ. ಗುತ್ತಿಗೆ ಒಪ್ಪಂದ

ನವದೆಹಲಿ/ಬೆಂಗಳೂರು: ಭಾರತೀಯ ವಾಯುಪಡೆಗೆ 83 ಅತ್ಯಾಧುನಿಕ (ಎಲ್ ಸಿಎ ಎಂಕೆ-1ಎ) ತೇಜಸ್ ಜೆಟ್ ಅನ್ನು ಸರಬರಾಜು ಮಾಡಲು ಹಿಂದೂ ಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್)ಗೆ ಕೇಂದ್ರ ಸರ್ಕಾರ 48,000 ಕೋಟಿ ರೂಪಾಯಿಯ ಗುತ್ತಿಗೆ ನೀಡಿರುವುದಾಗಿ ವರದಿಯಾಗಿದೆ.

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ರಕ್ಷಣಾ ಸಮಿತಿ ಸಭೆಯಲ್ಲಿ, ಭಾರತೀಯ ವಾಯು ಪಡೆಯನ್ನು ಬಲಿಷ್ಠಗೊಳಿಸಲು 83 ಅತ್ಯಾಧುನಿಕ ತಂತ್ರಜ್ಞಾನದ ತೇಜಸ್ ಜೆಟ್ ಖರೀದಿಗೆ ಜನವರಿ 13ರಂದು ಒಪ್ಪಿಗೆ ನೀಡಿತ್ತು. ಇದು ಅತೀ ದೊಡ್ಡ ದೇಶೀ ರಕ್ಷಣಾ ವ್ಯವಹಾರದ ಒಪ್ಪಂದವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದರು.

83 ಜೆಟ್ ಯುದ್ಧ ವಿಮಾನಗಳಲ್ಲಿ 73 ಎಂಕೆ 1ಎ ಯುದ್ಧ ವಿಮಾನ ಮತ್ತು ಹತ್ತು ತರಬೇತಿ ಯುದ್ಧ ವಿಮಾನಗಳು ಸೇರಿರುವುದಾಗಿ ವರದಿ ವಿವರಿಸಿದೆ. ಕೇಂದ್ರ ರಕ್ಷಣಾ ಸಚಿವಾಲಯ 40 ತೇಜಸ್ ಯುದ್ಧ ವಿಮಾನ ಖರೀದಿಗೆ ಅನುಮತಿ ನೀಡಿದೆ. ಒಪ್ಪಂದದ ಜೊತೆಗೆ ಒಟ್ಟು ತೇಜಸ್ ಯುದ್ಧ ವಿಮಾನಗಳ ಸಂಖ್ಯೆ 123ಕ್ಕೆ ಏರಿಕೆಯಾಗಿದೆ ಎಂದು ವರದಿ ವಿವರಿಸಿದೆ.