Friday, 22nd November 2024

Tejashwi Yadav: ಕೊಹ್ಲಿ ನನ್ನ ನಾಯಕತ್ವದಲ್ಲಿ ಆಡಿದ ಆಟಗಾರ ಎಂದ ಮಾಜಿ ಡಿಸಿಎಂ ತೇಜಸ್ವಿ ಯಾದವ್‌

Tejashwi Yadav

ಬಿಹಾರ: ಆರ್‌ಜೆಡಿ ನಾಯಕ ಲಾಲು ಪ್ರಸಾದ್‌ ಅವರ ಪುತ್ರ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್‌(Tejashwi Yadav) ಅವರು ತಾನು ಕ್ರಿಕೆಟ್‌ನಲ್ಲಿಯೇ ಮುಂದುವರಿಯುತ್ತಿದ್ದರೆ ಇಂದು ವಿರಾಟ್‌ ಕೊಹ್ಲಿಯಂತೆ(Virat Kohli) ಸ್ಟಾರ್‌ ಆಟಗಾರನಾಗುತ್ತಿದ್ದೆ ಎಂದು ಹೇಳಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ತೇಜಸ್ವಿ ಯಾದವ್‌ ತಮ್ಮ ಕ್ರಿಕೆಟ್‌ ಜರ್ನಿ ಬಗ್ಗೆ ಮುಕ್ತವಾಗಿ ಮಾತನಾಡಿದರು. ತೇಜಸ್ವಿ ಯಾದವ್‌ ರಾಜಕೀಯಕ್ಕೆ ಬರುವ ಮುನ್ನ ಕ್ರಿಕೆಟಿಗರಾಗಿದ್ದರು. ವಿರಾಟ್‌ ಕೊಹ್ಲಿ ಜತೆ ಡೆಲ್ಲಿ ತಂಡದ ಪರ ಜತೆಯಾಗಿ ಆಡಿದ್ದರು. ʼಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಒಂದು ಕಾಲದಲ್ಲಿ ಡೆಲ್ಲಿ ತಂಡದ ಪರ ನನ್ನ ನಾಯಕತ್ವದಲ್ಲಿ ಆಡಿದ ಆಟಗಾರ. ನಾನು ಕೂಡ ಉತ್ತಮ ಕ್ರಿಕೆಟಿಗನಾಗಿದ್ದೆ. ಆದರೆ, ನನ್ನ ಕಾಲಿನ ಲಿಗಮೆಂಟ್‌ ಸಮಸ್ಯೆಯಿಂದ ಕ್ರಿಕೆಟ್‌ ತೊರೆಯುವಂತಾಯಿತು. ಒಂದೊಮ್ಮೆ ನಾನು ಕ್ರಿಕೆಟ್‌ನಲ್ಲಿಯೇ ಮುಂದುವರಿಯುತ್ತಿದ್ದರೆ ಇಂದು ಕೊಹ್ಲಿಯಂತೆ ನನ್ನ ಹೆಸರು ಕೂಡ ಭಾರತೀಯ ಕ್ರಿಕೆಟ್‌ನಲ್ಲಿ ಕೇಳಿಬರುತ್ತಿತ್ತು ಎಂದರು. ಜತೆಗೆ ಕೊಹ್ಲಿ ಉತ್ತಮ ಆಟಗಾರ. ಆತನ ಆಟವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ ಎಂದು ಹೇಳುವ ಮೂಲಕ ಕೊಹ್ಲಿಯನ್ನು ಹೊಗಳಿದರು.

ತೇಜಸ್ವಿ ಶಾಲೆ ದಿನಗಳಿಂದಲೂ ಕ್ರಿಕೆಟ್ ಉತ್ಸಾಹಿಯಾಗಿದ್ದರು. ದೆಹಲಿಯ U-15 ಕ್ರಿಕೆಟ್ ತಂಡದ ಪರ ಮೊದಲ ಬಾರಿ ಕ್ರಿಕೆಟ್‌ ಆರಂಭಿಸಿದ್ದರು. ಇದಾದ ಬಳಿಕ ದೆಹಲಿU-17 ಮತ್ತು U-19 ಕ್ರಿಕೆಟ್ ತಂಡದ ಪರ ಆಡಿದ್ದರು. ವಿಶ್ವಕಪ್ ವಿಜೇತ U-19 ಭಾರತೀಯ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲಿ ಸ್ಟ್ಯಾಂಡ್‌ಬೈ ಆಟಗಾರನಾಗಿಯೂ ಸ್ಥಾನ ಪಡೆದಿದ್ದರು. ವಿಶ್ವದ ಅತ್ಯಂತ ಶ್ರೀಮಂತ ಮತ್ತು ಪ್ರಸಿದ್ಧ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿಯೂ ತೇಜಸ್ವಿ ಅವಕಾಶ ಪಡೆದಿದ್ದರು.

ಹೌದು, 2008 ರ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ತೇಜಸ್ವಿ ಅವರನ್ನು ಡೆಲ್ಲಿ ಡೇರ್‌ಡೆವಿಲ್ಸ್‌ನಲ್ಲಿ(ಈಗ ಡೆಲ್ಲಿ ಕ್ಯಾಪಿಟಲ್ಸ್‌) ಆಯ್ಕೆ ಮಾಡಿತು. 2012 ರ ತನಕ ಅವರು ಡೆಲ್ಲಿ ತಂಡದ ಭಾಗವಾಗಿದ್ದರು. ಆದರೆ ಒಂದೇ ಒಂದು ಪಂದ್ಯ ಆಡುವ ಅವಕಾಶ ಅವರಿಗೆ ಸಿಕ್ಕಿರಲಿಲ್ಲ. ಗಾಯದ ಸಮಸ್ಯೆಯಿಂದ ಅಂತಿಮವಾಗಿ ಕ್ರಿಕೆಟ್‌ ತೊರೆದು ರಾಜಕೀಯಕ್ಕೆ ಎಂಟ್ರಿಕೊಟ್ಟರು.

ಇದನ್ನೂ ಓದಿ Virat Kohli: 3 ತಿಂಗಳ ಬಳಿಕ ಭಾರತಕ್ಕೆ ಬಂದ ವಿರಾಟ್‌ ಕೊಹ್ಲಿ

2015 ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ, ತೇಜಸ್ವಿ ಗೆಲುವು ಸಾಧಿಸಿ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು. ನಿತೀಶ್ ಕುಮಾರ್ ಸಂಪುಟದಲ್ಲಿ ಲೋಕೋಪಯೋಗಿ, ಅರಣ್ಯ ಮತ್ತು ಪರಿಸರ ಖಾತೆಗಳನ್ನು ನಿಭಾಯಿಸಿದ್ದರು.

ತೇಜಸ್ವಿ ಯಾದವ್‌ 1 ಪ್ರಥಮ ದರ್ಜೆ ಪಂದ್ಯ, 2 ಲಿಸ್ಟ್‌ ಎ, 4 ಟಿ20 ಪಂದ್ಯಗಳನ್ನು ಆಡಿದ್ದಾರೆ. ಜಾರ್ಖಂಡ್‌ ಮತ್ತು ಡೆಲ್ಲಿ ತಂಡದ ಪರ ಆಡಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟರ್‌ ಆಗಿದ್ದರು.