ಹೈದರಾಬಾದ್: ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಾಲಕಿಯ ಗುರುತನ್ನು ಬಹಿರಂಗ ಪಡಿಸಿದ್ದಕ್ಕಾಗಿ ಬಿಜೆಪಿ ಶಾಸಕ ರಘುನಂದನ್ ರಾವ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
ತೆಲಂಗಾಣ ಕಾಂಗ್ರೆಸ್ನ ಉಸ್ತುವಾರಿ ನಾಯಕ ಮಾಣಿಕಂ ಠಾಕೂರ್ ಬಿಜೆಪಿ ಧೋರಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸುಪ್ರೀಂಕೋರ್ಟ್ನ ತೀರ್ಪಿನ ಉಲ್ಲಂಘನೆ. ರಾಜಕೀಯ ಕಾರಣಕ್ಕಾಗಿ ಮಾನಹಾನಿಗೆ ನಾವು ಅವಕಾಶ ಕೊಡುವುದಿಲ್ಲ. ಪ್ರಕರಣದ ಹಾದಿ ತಪ್ಪಿಸುವ ಜೊತೆಗೆ ಸಂತ್ರಸ್ತೆಯ ತೇಜೋವಧೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೊದಲು ದೆಹಲಿಯಲ್ಲಿ ಅತ್ಯಾಚಾರಕ್ಕೆ ಒಳಗಾದ ಬಾಲಕೀಯ ಗುರುತು ಬಹಿರಂಗ ಪಡಿಸಿದ್ದಕ್ಕೆ ರಾಹುಲ್ ಗಾಂಧಿ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು. ಆದರೆ ತೆಲಂಗಣದಲ್ಲಿ ಬಿಜೆಪಿ ಶಾಸಕರು ಸಂತ್ರಸ್ತೆಯ ಪರವಾಗಿ ಮಾತನಾಡುವ ವೇಳೆ ಆಕೆಯ ಗುರುತು ಬಹಿರಂಗವಾಗುವಂತಹ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ಪಬ್ನ ಪಾರ್ಟಿಯಲ್ಲಿ ಭಾಗವಹಿಸಿದ್ದ ಅಪ್ರಾಪ್ತ ಬಾಲಕಿಯ ಮೇಲೆ ಮೂವರು ಅಪ್ರಾಪ್ತರು, ಇಬ್ಬರು ವಯಸ್ಕರು ಸೇರಿ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪಗಳಿವೆ.
ಆಡಳಿತರೂಢ ಪಕ್ಷದ ಶಾಸಕರ ಪುತ್ರ ಅತ್ಯಾಚಾರದಲ್ಲಿ ಆರೋಪಿಯಾಗಿದ್ದಾನೆ. ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ. ಹಾಗಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದ್ದಾರೆ.